ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ, ರೈಲು ಸೇವೆ ವ್ಯತ್ಯಯ

Update: 2021-07-22 06:57 GMT
ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದ ಮುಂಬೈ ಹಾಗೂ ಅದರ ನೆರೆಯ ಪ್ರದೇಶಗಳಲ್ಲಿ ಸತತ ನಾಲ್ಕು ದಿನಗಳಿಂದ ನಿರಂತರ ಮಳೆ ಬೀಳುತ್ತಿದ್ದು ಬುಧವಾರ ರಾತ್ರಿ ಇಡೀ ಭಾರೀ ಮಳೆಯಾಗಿದೆ. ಹಲವು ಸ್ಥಳಗಳಲ್ಲಿ ಪ್ರವಾಹ ಉಂಟಾಗಿದೆ. ಕೆಲವಡೆ ಕಲ್ಲು-ಮಣ್ಣು ಕುಸಿತ ಸಂಭವಿಸಿದೆ.  ಇದರಿಂದಾಗಿ ಸ್ಥಳೀಯ ಹಾಗೂ ದೂರದ ಪ್ರಯಾಣದ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಹಲವುಸ್ಥಳಗಳಲ್ಲಿ ದೂರದ ಪ್ರಯಾಣದ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ರೈಲುಗಳಲ್ಲಿ ತೆರಳಬೇಕಾಗಿದ್ದ ಪ್ರಯಾಣಿಕರಿಗಾಗಿ ವಿಶೇಷ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ರಾತ್ರಿಯಿಂದ ಕೇಂದ್ರ ರೈಲ್ವೆ ವಿಭಾಗವು ಉಪ ನಗರ ರೈಲು ಸೇವೆಯು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ನಿಂದ ನೆರೆಯ ಥಾಣೆ ಜಿಲ್ಲೆಯ ಟಿಟ್ವಾಲಾ ಹಾಗೂ ಅಂಬರ್ ನಾಥ್ ನಿಲ್ದಾಣದವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ.

 ಮಳೆಯು ಗುರುವಾರ ಆರ್ಥಿಕ ನಗರವನ್ನು ಭೀಕರಗೊಳಿಸುವ ಸಾಧ್ಯತೆಯಿದೆ. ಭಾರತ ಹವಾಮಾನ ಇಲಾಖೆಯ ಪ್ರಕಾರ ಮುಂಬೈ ಹಾಗೂ  ಉಪನಗರಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮುಂಬೈಗೆ ಹವಾಮಾನ ಇಲಾಖೆ ಬುಧವಾರ ರೆಡ್ ಅಲರ್ಟ್  ನೀಡಿದ್ದು, ದೇಶದ ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಹಾರಾಷ್ಟ್ರದ ಪೂರ್ವ ವಿದರ್ಭ ಪ್ರದೇಶಕ್ಕೆ ಐಎಂಡಿ "ಆರಂಜ್" ಎಚ್ಚರಿಕೆಯನ್ನು ಸಹ ನೀಡಿದೆ, ಇದರಲ್ಲಿ ಭಂಡಾರ, ಚಂದ್ರಪುರ, ಗಡ್ಚಿರೋಲಿ ಹಾಗೂ  ಯವತ್ಮಾಲ್ ಮುಂತಾದ ಜಿಲ್ಲೆಗಳು ಸೇರಿವೆ, ಇದು ಭಾರೀ ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News