ಕಾಸರಗೋಡು : ದನದ ತಿವಿತಕ್ಕೆ ಶಿಕ್ಷಕ ಬಲಿ

Update: 2021-07-22 09:11 GMT

ಕಾಸರಗೋಡು : ದನದ ತಿವಿತಕ್ಕೆ ಶಿಕ್ಷಕರೋರ್ವರು ಮೃತಪಟ್ಟ ದಾರುಣ ಘಟನೆ ಬುಧವಾರ ಚೆರ್ವತ್ತೂರಿನಲ್ಲಿ ನಡೆದಿದೆ.

ಆನಿಕ್ಕೋಡಿ ನಿವಾಸಿ ಸಿ. ರಾಮಕೃಷ್ಣನ್ (54) ಮೃತರು ಎಂದು ಗುರುತಿಸಲಾಗಿದೆ.

ಅವರು ಚೆರ್ವತ್ತೂರು ಬಿಆರ್ ಸಿ ವಿಕಲಚೇತನ ವಿದ್ಯಾರ್ಥಿಗಳ ಸ್ಪೆಷಲ್ ಎಜುಕೇಟರ್ ಆಗಿದ್ದರು. ಮನೆಯ ಕೊಟ್ಟಿಗೆಯಲ್ಲಿ ದನಕ್ಕೆ ಆಹಾರ ನೀಡಲು ತೆರಳಿದ್ದ ಸಂದರ್ಭ ಹೊಟ್ಟೆಯ ಭಾಗಕ್ಕೆ ದನ ಕೊಂಬಿನಿಂದ ತಿವಿದ ಪರಿಣಾಮ ಗಂಭೀರ ಗಾಯಗೊಂಡ ರಾಮಕೃಷ್ಣನ್ ಅವರನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಮಾಜ ಸೇವಕರಾಗಿದ್ದ ರಾಮಕೃಷ್ಣನ್ ಕೇರಳ ರಾಜ್ಯದುದ್ದಕ್ಕೂ ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ಸಾಕಷ್ಟು ಪ್ರಯತ್ನಿಸಿದ್ದರು. ಪರಿಸರ  ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದರು. ವಿಕಲ ಚೇತನ ವಿದ್ಯಾರ್ಥಿಗಳಿಗಾಗಿ ಕಾಸರಗೋಡಿನಲ್ಲಿ ರಾಜ್ಯ ಮಟ್ಟದ ಕಲೋತ್ಸವ ಆಯೋಜಿಸಿದ್ದರು.

ಮೊಗ್ರಾಲ್ ಪುತ್ತೂರು ಸರಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ 17 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು , ಈ ಅವಧಿಯಲ್ಲಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಕಲಚೇತನ ಮಕ್ಕಳ ಅಭಿವೃದ್ಧಿ ಯೋಜನೆಗಳಿಗೆ ಯತ್ನಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News