'ತಾರೀಖ್ ಪೇ ತಾರೀಖ್': ದಿಲ್ಲಿ ನ್ಯಾಯಾಲಯದಲ್ಲಿ ಸಿನಿಮೀಯ ದೃಶ್ಯ ಸೃಷ್ಟಿಸಿದ ವ್ಯಕ್ತಿಯಿಂದ ದಾಂಧಲೆ
Update: 2021-07-22 15:33 IST
ಹೊಸದಿಲ್ಲಿ: ನ್ಯಾಯಾಲಯ ವಿಚಾರಣೆಯ ದಿನಾಂಕಗಳನ್ನಷ್ಟೇ ನೀಡಿ ನ್ಯಾಯದಾನ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ ಎಂದು ಆರೋಪಿಸಿ ದಿಲ್ಲಿಯ ನಿವಾಸಿಯೊಬ್ಬ ನ್ಯಾಯಾಲಯಲ್ಲಿ 'ದಾಮಿನಿ' ಚಿತ್ರದಲ್ಲಿ ನಟ ಸನ್ನಿ ಡಿಯೋಲ್ ಅವರ 'ತಾರೀಕ್ ಪೇ ತಾರೀಖ್' ಸಂಭಾಷಣೆಯನ್ನು ಪುನರುಚ್ಛರಿಸುತ್ತಾ ಅಲ್ಲಿನ ಪೀಠೋಪಕರಣಗಳು ಹಾಗೂ ಕಂಪ್ಯೂಟರ್‍ಗಳಿಗೆ ಹಾನಿಯೆಸಗಿದ ಥೇಟ್ ಸಿನೆಮೀಯ ಶೈಲಿಯ ಘಟನೆ ದಿಲ್ಲಿಯ ಕರ್ಕಡೂಮ ನ್ಯಾಯಾಲಯದ ಕೋರ್ಟ್ ರೂಂ 66ರಲ್ಲಿ ಜುಲೈ 17ರಂದು ನಡೆದಿದೆ.
ರಾಕೇಶ್ ಎಂಬ ಹೆಸರಿನ ಈ ವ್ಯಕ್ತಿಗೆ ಸಂಬಂಧಿಸಿದ ಪ್ರಕರಣ ಈ ನಿರ್ದಿಷ್ಟ ನ್ಯಾಯಾಲಯದಲ್ಲಿ 2016ರಿಂದ ಬಾಕಿಯಿದ್ದುದರಿಂದ ಆತ ಆಕ್ರೋಶದಿಂದ ಹೀಗೆ ವರ್ತಿಸಿದ್ದನೆಂದು ತಿಳಿದು ಬಂದಿದೆ.
ಆತ ಪೀಠೋಪಕರಣಗಳಿಗೆ ಹಾನಿಯೆಸಗುತ್ತಿದ್ದಂತೆಯೇ ಅಲ್ಲಿನ ಸಿಬ್ಬಂದಿ ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗಾಗಮಿಸಿ ಆತನನ್ನು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ.