ಉಡುಪಿ: ಷೇರು ವ್ಯವಹಾರಸ್ಥನ ಅಪಹರಣ, ದರೋಡೆ: ಮೂವರು ಆರೋಪಿಗಳ ಸೆರೆ
ಉಡುಪಿ, ಜು. 22: ನಗರದ ವಾದಿರಾಜ ಕಾಂಪ್ಲೆಕ್ಸ್‌ನಲ್ಲಿರುವ ಗ್ಲೋಬಲ್ ಟೈಮ್ ಟ್ರೇಡರ್ಸ್ ಕಚೇರಿಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಷೇರು ಮಾರುಕಟ್ಟೆ ವ್ಯವಹಾರ ನಡೆಸುತಿದ್ದ ವ್ಯಕ್ತಿಯೊಬ್ಬರನ್ನು ಬಲಾತ್ಕಾರವಾಗಿ ಅಪಹರಿಸಿ, ಲಕ್ಷಾಂತರ ರೂ.ಗಳನ್ನು ದರೋಡೆಗೈದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣವನ್ನು ಕೇವಲ ಮೂರು ದಿನಗಳಲ್ಲೇ ಬೇಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಂತೋಷ ಬೋವಿ, ಅನಿಲ್ ಪೂಜಾರಿ ಹಾಗೂ ಮಣಿಕಂಠ ಖಾರ್ವಿ ಎಂದು ಪೊಲೀಸರು ಗುರುತಿಸಿದ್ದು, ಇವರೆಲ್ಲರೂ ಕಾರ್ಕಳದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೆಂದು ತಿಳಿದುಬಂದಿದೆ. ಇವರು ಈ ಹಿಂದೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಮೂವರು ಆರೋಪಿಗಳ ವಿರುದ್ಧ ಕಾಪು, ಕಾರ್ಕಳ ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಮೂಲತ: ತುಮಕೂರು ಜಿಲ್ಲೆಯ ಅಶೋಕ್ ಕುಮಾರ್ ಎಸ್. ಎಂಬವರು ನಾಲ್ಕು ತಿಂಗಳಿನಿಂದ ನಗರದಲ್ಲಿ ಷೇರು ಮಾರುಕಟ್ಟೆ ವ್ಯವಹಾರ ನಡೆಸಿಕೊಂಡಿದ್ದು, ಜು.16ರ ಅಪರಾಹ್ನ 3 ಗಂಟೆ ಸುಮಾರಿಗೆ ಸಂತೋಷ ಎಂಬವರು ಕಚೇರಿಗೆ ಬಂದು ವ್ಯವಹಾರದ ಮಾತುಕತೆಯ ಸಲುವಾಗಿ ಆತನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಅಜ್ಜರಕಾಡು ಬಳಿ ಇನ್ನೂ ನಾಲ್ವರು ಕಾರನ್ನೇರಿ ಅಲ್ಲಿಂದ ತನ್ನನ್ನು ಬಲಾತ್ಕಾರವಾಗಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು 70 ಲಕ್ಷ ರೂ. ನೀಡುವಂತೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಹಲ್ಲೆ ನಡೆಸಿರುವುದಾಗಿ ಮರುದಿನ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅವರೆಲ್ಲರೂ ಹೊರವಲಯದ ರೆಸಾರ್ಟ್ ಒಂದಕ್ಕೆ ತನ್ನನ್ನು ಕೊಂಡೊಯ್ದು ಬಲವಂತವಾಗಿ ಕೂಡಿ ಹಾಕಿ, ತನ್ನ ಬ್ಯಾಗ್‌ನಲ್ಲಿದ್ದ 1.99 ಲಕ್ಷ ರೂ.ನಗದು, ಎರಡು ಮೊಬೈಲ್ ಫೋನ್, ವಾಚ್ ಅಲ್ಲದೇ ಕಂಪೆನಿ ಲೈಸನ್ಸ್, ಡಿಎಲ್, ಬ್ಯಾಂಕಿನ ಚೆಕ್‌ಗಳು ಸೇರಿದಂತೆ ಹಲವು ದಾಖಲೆಗಳನ್ನು ಸುಲಿಗೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಆರೋಪಿಗಳು ಮರುದಿನ ಅಶೋಕ್ ಕುಮಾರ್‌ರನ್ನು ಉಡುಪಿಯ ಕೆನರಾ ಬ್ಯಾಂಕಿಗೆ ಕರೆದುಕೊಂಡು ಬಂದು ಬಲವಂತವಾಗಿ ಅವರ ಖಾತೆಯಲ್ಲಿದ್ದ 10 ಲಕ್ಷ ರೂ. ಹಣವನ್ನು ಡ್ರಾ ಮಾಡಿಸಿಕೊಳ್ಳಲು ಪ್ರಯತ್ನಿಸಿದಾಗ, ಅಶೋಕ್ ಕುಮಾರ್ ಬೊಬ್ಬೆ ಹೊಡೆದಿದ್ದು, ಇದರಿಂದ ಬ್ಯಾಂಕಿನೊಳಗೆ ಕರೆತಂದ ಆರೋಪಿ ಯೂ ಸೇರಿದಂತೆ ಇನ್ನೋವಾ ಕಾರಿನಲ್ಲಿದ್ದ ಎಲ್ಲಾ ಆರೋಪಿಗಳು ಇವರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದರು.
ದೂರು ದಾಖಲಿಸಿಕೊಂಡ ನಗರ ಠಾಣೆಯ ಪಿಎಸ್‌ಐ ಪ್ರಮೋದ್ ಕುಮಾರ್, ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಪ್ರಕರಣದ ತನಿಖೆ ಕೈಗೊಂಡು, ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳ ರಚನೆ ಮಾಡಿ ಕೃತ್ಯ ನಡೆದ ಸ್ಥಳಗಳಾದ ವಾದಿರಾಜ ಕಾಂಪ್ಲೆಕ್ಸ್, ಲಯನ್ಸ್ ಸರ್ಕಲ್ ಬಳಿಯ ಕೆನರಾ ಬ್ಯಾಂಕ್, ಮಲ್ಪೆ ಪಡುಕೆರೆ ರೆಸಾರ್ಟ್‌ಗಳ ಸಿಸಿ ಕ್ಯಾಮರಾಗಳ ಫೂಟೇಜ್ ಗಳನ್ನು ಪರಿಶೀಲಿಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿತ್ತು.
ಜು.18ರಂದು ಬೆಳಗ್ಗೆ ಮಣಿಪಾಲದ ಮಣ್ಣಪಳ್ಳ ಕೆರೆಯ ಮುಂಭಾಗದ ಪಾರ್ಕಿಂಗ್ ಜಾಗದಲ್ಲಿ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು ಪತ್ತೆಯಾಗಿದ್ದು, ಕಾರಿನ ಮಾಲಕರ ವಿಚಾರಣೆ ನಡೆಸಿದಾಗ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋದವರ ಬಗ್ಗೆ ಮಾಹಿತಿ ದೊರಕಿದ್ದು, ಆರೋಪಿಗಳ ಜಾಡನ್ನು ಕಂಡು ಹಿಡಿಯಲಾಯಿತು.
ಎಲ್ಲಾ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಖಚಿತ ಮಾಹಿತಿ ಮೇರೆಗೆ ಜು.19ರಂದು ಸಂಜೆ 6:15ಕ್ಕೆ ಆರೋಪಿಗಳಾದ ಸಂತೋಷ, ಅನಿಲ್ ಪೂಜಾರಿ, ಮಣಿಕಂಠ ಖಾರ್ವಿ ಅವರನ್ನು ಕಟಪಾಡಿ ಜಂಕ್ಷನ್ ಬಳಿ ವಶಕ್ಕೆ ಪಡೆದು, ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್, ತಲವಾರುಗಳು ಹಾಗೂ ಅಶೋಕ್ ಕುಮಾರ್ ರಿಂದ ಸುಲಿಗೆ ಮಾಡಿದ 1.35 ಲಕ್ಷ ರೂ.ನಗದು ಹಾಗೂ ಮೊಬೈಲ್‌ನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಮೇಲೆ ಕಾಪು, ಕಾರ್ಕಳ ಗ್ರಾಮಾಂತರ, ಸುಬ್ರಮಣ್ಯ ಠಾಣೆ ಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಅವರುಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಅವರ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಡುಪಿ ಡಿವೈಎಸ್ಪಿ ಸುಧಾಕರ ಸದಾನಂದ ನಾಯ್ಕ್ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿ, ಪಿಎಸ್ಐ ಅಶೋಕ್ ಕುಮಾರ್, ಅಪರಾಧ ಪಿಎಸ್ಐ ವಾಸಪ್ಪ ನಾಯ್ಕ್ ಅವರು ಸಿಬ್ಬಂದಿಗಳ ನೆರವಿನೊಂದಿಗೆ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದರು.