ದಲಿತ್ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ : ಸೇಸಪ್ಪ ಬೆದ್ರಕಾಡು
ಪುತ್ತೂರು: ಕಳೆದ 15 ವರ್ಷಗಳಿಂದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಅಧ್ಯಕ್ಷನಾಗಿದ್ದು, ಇದೀಗ ನನ್ನ ಅವಧಿ ಆ.15 ಕ್ಕೆ ಪೂರ್ಣಗೊಳ್ಳ ಲಿದ್ದು, ದ.ಕ.ಜಿಲ್ಲಾ ಕಾರ್ಯದರ್ಶಿಯವರಿಗೆ ರಾಜೀನಾಮೆ ನೀಡಿದ್ದೇನೆ ಎಂದು ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 15 ವರ್ಷಗಳ ಕಾಲ ಅಧ್ಯಕ್ಷನಾಗಿ ಸಂಘವನ್ನು ಕಟ್ಟಿ, ಬೆಳೆಸಿ, ಸಂಘದ, ಸಮು ದಾಯದವರಿಗೆ ಪ್ರತಿಯೊಂದು ವಿಚಾರದಲ್ಲೂ ನ್ಯಾಯ ಒದಗಿಸಿಕೊಟ್ಟು ಒಳ್ಳೆಯ ಕೆಲಸ ಮಾಡಿರುವ ನಿಟ್ಟಿನಲ್ಲಿ ನನ್ನನ್ನು ಸಂಘ 15 ವರ್ಷಗಳ ಕಾಲ ಅಧ್ಯಕ್ಷನಾಗಿರುವಂತೆ ಮಾಡಿದೆ. ಮುಂದೆ ಬೇರೆಯವರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಭಾವನೆ. ನಾನೇ ಅಧ್ಯಕ್ಷಗಾದಿ ಮುಂದುವರಿಸಿ ಬೇರೆಯವರಿಗೆ ಅವಕಾಶ ನೀಡುವುದಿಲ್ಲ ಎಂಬ ಆರೋಪ ಕೇಳಲು ನಾನು ಸಿದ್ಧನಿಲ್ಲ. ಈ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದೇನೆ. ಸಂಘದ ಪದಾಧಿಕಾರಿಗಳಿಗೆ, ಸಮುದಾಯದವರಿಗೆ, ಅಲ್ಲದೆ ನನಗೆ ಸಹಕಾರ ನೀಡಿದ ಅಧಿಕಾರಿ ವರ್ಗ, ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸಿದರು.
ಕೆಲವು ದಿನಗಳ ಹಿಂದೆ ಅಗ್ರಹಾರದ ಮಹಿಳೆಯೊಬ್ಬರು ಸ್ಥಳೀಯ ಗೌಡ ಸಮುದಾಯದವರೊಬ್ಬರ ಕುಮ್ಮಕ್ಕಿನಿಂದ ಸಂಘದ ಕೆಲವು ಸದಸ್ಯರ ಮೇಲೆ ಮಾನಭಂಗದ ಕುರಿತು ಸುಳ್ಳು ದೂರು ನೀಡಿರುವುದನ್ನು ಸಂಘ ಖಂಡಿಸುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಬೆದ್ರಕಾಡು, ಉಪಾಧ್ಯಕ್ಷ ಮನೋಹರ್ ಕೋಡಿಜಾಲು, ಸುಳ್ಯದ ಉಮೇಶ್ ಅಲೆಕ್ಕಾಡಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಉಪಸ್ಥಿತರಿದ್ದರು.