ಮಂಗಳೂರು: ಬಸ್ ಚಲಾವಣೆಯಲ್ಲಿದ್ದಾಗಲೇ ಕುಸಿದು ಬಿದ್ದ ಚಾಲಕ
ಮಂಗಳೂರು, ಜು.22: ತುಂಬಿದ್ದ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಬಸ್ ಚಾಲಕ ಲೋ ಬಿಪಿಯಿಂದಾಗಿ (ಕಡಿಮೆ ರಕ್ತದೊತ್ತಡ) ಸ್ಟೇರಿಂಗ್ ಮೇಲೆ ಕುಸಿದು ಬಿದ್ದ ಘಟನೆ ಅಡ್ಯಾರ್‌ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲೂ ಪ್ರಯಾಣಿಕರ ಜೀವ ಉಳಿಸಿ ಚಾಲಕ ಮಾನವೀಯತೆ ಮೆರೆಯುವಲ್ಲಿ ಸಫಲರಾಗಿದ್ದಾರೆ.
ಬಸ್ ಚಾಲಕ ಪುತ್ತೂರು ಮೂಲದ ಸಂತೋಷ್ ಎಂದು ತಿಳಿದುಬಂದಿದೆ.
ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್‌ಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬರುತ್ತಿದ್ದ ಖಾಸಗಿ ಬಸ್ ಅಡ್ಯಾರ್ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಕಣ್ಣು ಮಂಜಾಗಿದ್ದು, ತಕ್ಷಣ ಬಸ್ ನಿಲ್ಲಿಸಿದ್ದಾನೆ. ಚಾಲಕನಿಗೆ ಕಣ್ಣು ಮಂಜಾಗುತ್ತಲೇ ಬಸ್ ಹೆದ್ದಾರಿ ಬದಿಯ ಸಹ್ಯಾದ್ರಿ ಕಾಲೇಜಿನ ಗೇಟ್ ಮುಂಭಾಗದಲ್ಲಿ ನಿಂತಿದೆ. ಬಸ್ ಪ್ರಯಾಣಿಕರಿಂದ ತುಂಬಿತ್ತು. ಇಂತಹ ಸಂದರ್ಭದಲ್ಲೂ ಪ್ರಯಾಣಿಕರ ಜೀವ ಅಮೂಲ್ಯವೆಂದು ಮನಗಂಡ ಚಾಲಕ ಹಲವರ ಜೀವ ಉಳಿಸಿದ್ದಾರೆ.
ಅಸ್ವಸ್ಥಗೊಂಡ ಚಾಲಕನನ್ನು ಸ್ಥಳೀಯರು ಮತ್ತು ಪ್ರಯಾಣಿಕರು ಸೇರಿ ಸ್ಟೇರಿಂಗ್ ಎಡೆಯಿಂದ ಹೊರಗೆ ಎಳೆದಿದ್ದಾರೆ. ನಂತರ ಪಡೀಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರಂಭದಲ್ಲಿ ಫಿಟ್ಸ್ ಬಂದಿದೆ ಎನ್ನಲಾಗಿತ್ತು. ಪ್ರಯಾಣಿಕರು ಮತ್ತು ಸಿಬ್ಬಂದಿಯೂ ಅದನ್ನೇ ಹೇಳಿದ್ದರು. ವೈದ್ಯರು ಪರಿಶೀಲಿಸಿ, ಲೋ ಬಿಪಿಯಿಂದಾಗಿ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದಾರೆ. ಚಾಲಕನ ಅಸಮರ್ಪಕ ಆಹಾರ ಸೇವನೆಯಿಂದಾಗಿ ಕಡಿಮೆ ರಕ್ತದೊತ್ತಡ ಕಂಡುಬಂದಿತ್ತು ಎಂದು ತಿಳಿದುಬಂದಿದೆ.
ಚಾಲಕ ಸಂತೋಷ್ ಕಳೆದ ಹಲವು ತಿಂಗಳಿಂದ ಇದೇ ಬಸ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಚಾಲಕನ ಚಾಕಚಕ್ಯತೆಯಿಂದ ದುರಂತ ತಪ್ಪಿಹೋಗಿದೆ ಎಂದು ಬಸ್‌ನ ನಿರ್ವಾಹಕ ತಿಳಿಸಿದ್ದಾರೆ.