ಕೊರೋನ ಮೂಲದ ಬಗ್ಗೆ 2ನೇ ಹಂತದ ತನಿಖೆ : ಡಬ್ಲ್ಯುಎಚ್‌ಒ ಪ್ರಸ್ತಾವಕ್ಕೆ ಚೀನಾ ತಿರಸ್ಕಾರ

Update: 2021-07-22 14:33 GMT

ಬೀಜಿಂಗ್, ಜು. 22: ಕೊರೋನ ವೈರಸ್ ಮೂಲದ ಬಗ್ಗೆ ಎರಡನೇ ಹಂತದ ತನಿಖೆ ನಡೆಸುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಪ್ರಸ್ತಾವವನ್ನು ಚೀನಾ ತಿರಸ್ಕರಿಸಿದೆ.

ಕೊರೋನ ವೈರಸ್ ಮೂಲದ ಬಗ್ಗೆ ಚೀನಾದಲ್ಲಿ ಎರಡನೇ ಹಂತದ ಅಧ್ಯಯನ ನಡೆಸುವ ಪ್ರಸ್ತಾವವನ್ನು ವಿಶ್ವ ಆರೋಗ್ಯ ಸಂಸ್ಥೆ ಈ ತಿಂಗಳ ಆರಂಭದಲ್ಲಿ ಮುಂದಿಟ್ಟಿತ್ತು. ಈ ಬಾರಿ ಚೀನಾದ ವುಹಾನ್ ನಗರದಲ್ಲಿರುವ ಪ್ರಯೋಗಾಲಯಗಳು ಮತ್ತು ಮಾರುಕಟ್ಟೆಗಳಲ್ಲಿಯೂ ತನಿಖೆ ನಡೆಸುವ ಇಂಗಿತವನ್ನು ಅದು ವ್ಯಕ್ತಪಡಿಸಿತ್ತು ಹಾಗೂ ಚೀನಾದ ಅಧಿಕಾರಿಗಳು ಈ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಕರೆ ನೀಡಿತ್ತು.

ಚೀನಾದ ವುಹಾನ್ ನಗರದಲ್ಲಿರುವ ಜೈವಿಕ ಪ್ರಯೋಗಾಲಯವೊಂದರಿಂದ ಕೊರೋನ ವೈರಸ್ ಸೋರಿಕೆಯಾಗಿದೆ ಎಂಬ ಸಂದೇಹ ವ್ಯಾಪಕವಾಗಿ ಹರಡಿಕೊಂಡಿದೆ.

‘‘ಕೊರೋನ ವೈರಸ್ ಮೂಲವನ್ನು ಪತ್ತೆಹಚ್ಚುವ ಯೋಜನೆಯನ್ನು ನಾವು ಒಪ್ಪುವುದಿಲ್ಲ. ಈ ಪ್ರಸ್ತಾವವು ಕೆಲವು ವಿಷಯಗಳಲ್ಲಿ ಸಾಮಾನ್ಯ ಜ್ಞಾನ ಮತ್ತು ವಿಜ್ಞಾನವನ್ನು ಉಲ್ಲಂಘಿಸುತ್ತದೆ’’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಸಹಾಯಕ ಸಚಿವ ಝೆಂಗ್ ಯಿಕ್ಸಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಚೀನಾದ ಪರಿಣತರು ನೀಡಿರುವ ಅಭಿಪ್ರಾಯ ಮತ್ತು ಸಲಹೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ಗಂಭೀರವಾಗಿ ಪರಿಶೀಲಿಸುವುದು ಹಾಗೂ ಕೋವಿಡ್-19 ಸಾಂಕ್ರಾಮಿಕದ ಮೂಲ ಪತ್ತೆಯನ್ನು ವೈಜ್ಞಾನಿಕವಾಗಿ ನಡೆಸಿ ರಾಜಕೀಯ ಹಸ್ತಕ್ಷೇಪವನ್ನು ಬದಿಗಿಡುವುದು ಎಂಬುದಾಗಿ ನಾವು ಭಾವಿಸುತ್ತೇವೆ’’ ಎಂದು ಝೆಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News