ಪಾಕ್; ಮಾಜಿ ರಾಜತಾಂತ್ರಿಕರೊಬ್ಬರ ಮಗಳ ಹತ್ಯೆ

Update: 2021-07-22 15:12 GMT
photo: twitter/@Hammadbalghari

ಇಸ್ಲಾಮಾಬಾದ್, ಜು. 22: ಪಾಕಿಸ್ತಾನದ ಮಾಜಿ ರಾಜತಾಂತ್ರಿಕರೊಬ್ಬರ ಮಗಳು ಇಸ್ಲಾಮಾಬಾದ್‌ನಲ್ಲಿ ಕೊಲೆಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದ ರಾಯಭಾರಿಯ ಮಗಳು ಇಸ್ಲಾಮಾಬಾದ್‌ನಲ್ಲಿ ಅಪಹರಣಗೊಂಡು ಬಿಡುಗಡೆಯಾದ ಘಟನೆ ನಡೆದ ಕೆಲವೇ ದಿನಗಳ ಬಳಿಕ ಈ ಕೊಲೆ ಸಂಭವಿಸಿದೆ.

ಶೌಕತ್ ಮುಕದಮ್‌ರ 27 ವರ್ಷದ ಮಗಳು ನೂರ್ ಮುಕದಮ್ ಇಸ್ಲಾಮಾಬಾದ್‌ನ ಎಫ್-7/4 ಸೆಕ್ಟರ್ ಪ್ರದೇಶದಲ್ಲಿ ಮಂಗಳವಾರ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಮುಕದಮ್ ಹಿಂದೆ ದಕ್ಷಿಣ ಕೊರಿಯ ಮತ್ತು ಕಝಖ್‌ಸ್ತಾನ ದೇಶಗಳಿಗೆ ಪಾಕಿಸ್ತಾನದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

ನೂರ್ ಮುಕದಮ್‌ರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಕೊಲೆಗೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಝಹೀರ್ ಝಾಫರ್ ಎಂಬ ಹೆಸರಿನ ವ್ಯಕ್ತಿಯನ್ನು ನೂರ್ ಕೊಲೆಗೆ ಸಂಬಂಧಿಸಿದ ಬಂಧಿಸಲಾಗಿದೆ’’ ಎಂದು ಇಸ್ಲಾಮಾಬಾದ್ ಪೊಲೀಸರನ್ನು ಉಲ್ಲೇಖಿಸಿ ‘ಸಮಾ ಟಿವಿ’ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ರಾಯಭಾರ ಕಚೇರಿಗಳು ಮತ್ತು ಅವುಗಳ ಸಿಬ್ಬಂದಿಯ ಭದ್ರತೆ ಬಗ್ಗೆ ಸಂದೇಹಗಳು ಹೆಚ್ಚುತ್ತಿರುವಂತೆಯೇ ಈ ಕೊಲೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News