ಉಚ್ಚಿಲ: ತೀವ್ರಗೊಂಡ ಕಡಲಿನಬ್ಬರ, ಎರಡು ಮನೆಗಳಿಗೆ ಹಾನಿ

Update: 2021-07-23 10:09 GMT

ಉಳ್ಳಾಲ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ತೀವ್ರಗೊಂಡ ಕಡಲಿನಬ್ಬರದಿಂದ ಶುಕ್ರವಾರ ಎರಡು ಮನೆಗಳಿಗೆ ಹಾನಿಯಾಗಿದೆ.

ಉಚ್ಚಿಲ ನಿವಾಸಿ ಚರಣ್ ಹಾಗೂ ಸಂಗೀತ ಎಂಬವರ ಮನೆ ಭಾಗಶಃ ಹಾನಿಯಾಗಿದೆ. ಈ ಎರಡು ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ದಗೊಂಡ ಹಿನ್ನೆಲೆಯಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು,‌ ಶುಕವಾರ ಬಟ್ಟಪ್ಪಾಡಿಯ ರಸ್ತೆ ಸಂಪೂರ್ಣ ಸಮುದ್ರ ಪಾಲಾಗಿದೆ. ಕೆಲವು ತೆಂಗಿನ ಮರಗಳು ಸಮುದ್ರದ ಮಡಿಲು ಸೇರಿದೆ. ಕೆಲವು ಮನೆಗಳು ಅಪಾಯದಂಚಿನಲ್ಲಿವೆ. ವಿದ್ಯುತ್ ಕಂಬ ಧರೆಗುರುಳಿದ್ದು, ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಸಂಪೂರ್ಣ ಸಮುದ್ರ ಪಾಲಾದ ಹಿನ್ನೆಲೆಯಲ್ಲಿ ಎಡಿಬಿಯವರು ಮತ್ತೆ ಕಾಮಗಾರಿ ಆರಂಭಿಸಿದ್ದಾರೆ. ಈ ಭಾಗದ ಜನರಿಗೆ ಹೋಗಲು ಬೇರೆ ದಾರಿ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಇಲ್ಲದ ಕಾರಣ ಇಲ್ಲಿ ವಾಸವಿರುವ ಕುಟುಂಬ ಸಂಕಷ್ಟಕ್ಕೀಡಾಗಿದೆ. 

ಚರಣ್ ಕುಟುಂಬ ಸಂಬಂಧಿಕರ ಮನೆಗೆ ತೆರಳಿದೆ. ಸಂಗೀತ ಅವರ ಕುಟುಂಬ ಮುಂಬೈಯಲ್ಲಿದ್ದು, ಹಾನಿಯಾದ ಅವರ ಮನೆಯಲ್ಲಿ ಯಾರೂ ವಾಸವಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಸಹಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News