ಮಲ್ಪೆ- ಪಡುಕೆರೆ ಸೇತುವೆಯ ಸಂಪರ್ಕ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು

Update: 2021-07-23 14:29 GMT

ಮಲ್ಪೆ, ಜು. 23: ಮಲ್ಪೆಯಿಂದ ಪಡುಕರೆ ಸಂಪರ್ಕ ಸೇತುವೆಯ ಆರಂಭದ ತುದಿಯಲ್ಲಿನ ಕಾಂಕ್ರಿಟ್ ರಸ್ತೆಯ ಮಧ್ಯೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮೂರನೇ ಹಂತದ ಬಂದರಿನ ಬಾಪುತೋಟದ ಭಾಗದಲ್ಲಿರುವ ಸೇತುವೆ ಯನ್ನು ಸಂಪರ್ಕಿಸುವ ಸುಮಾರು 100 ಮೀಟರ್‌ವರೆಗೆ ರಸ್ತೆಯ ಉದ್ದಕ್ಕೆ ಎರಡು ಕಾಂಕ್ರೀಟ್ ಸ್ಲ್ಯಾಬ್‌ಗಳ ನಡುವೆ ಬಿರುಕು ಕಾಣಿಸಿಕೊಂಡಿದೆ. 6-7 ತಿಂಗಳ ಹಿಂದೆ ಇದ್ದ ಸಣ್ಣ ಬಿರುಕು ಇದೀಗ ಬಹಳ ವಿಸ್ತಾರಗೊಳ್ಳುತ್ತಿದೆ.

ಸುಮಾರು ಎರಡು ಮೂರು ಇಂಚುಗಳಷ್ಟು ಅಗಲವಾದ ಈ ಬಿರುಕಿನಲ್ಲಿ ದ್ವಿಚಕ್ರ ವಾಹನಗಳ ಚಕ್ರ ಸಿಲುಕಿ ಅಪಘಾತಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ನಗರಸಭೆ ಯಾವುದೇ ಕ್ರಮ ಜರಗಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಈ ರಸ್ತೆಯಲ್ಲಿ ಪ್ರತಿದಿನ ಟನ್‌ಗಟ್ಟಲೆ ಭಾರವನ್ನು ಹೊತ್ತ ಘನವಾಹನಗಳು ಸಂಚರಿಸುತ್ತಿವೆ. ಇದರಿಂದ ಸೇತುವೆಯ ರಸ್ತೆ ಬಿರುಕು ಬಿಡಲು ಕಾರಣ ಎಂದು ದೂರಲಾಗುತ್ತಿದೆ. ಸೇತುವೆ ಸಂಪರ್ಕ ಕಲ್ಪಿಸುವ ಈ ಕಾಂಕ್ರೀಟ್ ರಸ್ತೆಯ ಅಡಿಭಾಗದಲ್ಲಿ ಮರಳು ತುಂಬಿದ್ದು, ಮಳೆ ನೀರು ಈ ಬಿರುಕಿನ ಸಂದಿನೊಳಗೆ ಹರಿದು ಕ್ರಮೇಣ ರಸ್ತೆ ಅಡಿಭಾಗ ಕುಸಿಯುವ ಸಾಧ್ಯತೆ ಉಂಟಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ನಗರಸಭೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಎಲ್ಲರೂ ಕೂಡ ಸರಿ ಸರಿಪಡಿಸುತ್ತೇವೆ ಎಂದು ಹೇಳುತ್ತಾರೆಯೇ ಹೊರತು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಸ್ತೆ ಕುಸಿದು ಬೀಳುವ ಮೊದಲೇ ಈ ಅಪಾಯಕಾರಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು ಎಂದು ಆನಂದ ಪುತ್ರನ್ ಪಡುಕರೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News