×
Ad

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ: ದ.ಕ. ಜಿಲ್ಲಾಧಿಕಾರಿ ಆದೇಶ

Update: 2021-07-23 21:10 IST

ಮಂಗಳೂರು, ಜು.23: ಸಾರ್ವಜನಿಕ ಹಿತದೃಷ್ಟಿಯಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ವನ್ನು ರಾತ್ರಿ ಸಮಯದಲ್ಲಿ ನಿರ್ಬಂಧಿಸಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ರಾ.ಹೆ. 75ರ ಮಂಗಳೂರು-ಬೆಂಗಳೂರು ರಸ್ತೆಯ ಶಿರಾಡಿ ಘಾಟ್ ಭಾಗದ ಭೂಕುಸಿತ ಉಂಟಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ರಾ.ಹೆ. 73ರ ಮಂಗಳೂರು-ತುಮಕೂರು ರಸ್ತೆ (ಚಾರ್ಮಾಡಿ ಘಾಟ್) ಮುಖಾಂತರ ಸಂಚರಿಸುವ ಸಾಧ್ಯತೆ ಇದೆ. ಆದರೆ ಚಾರ್ಮಾಡಿ ಘಾಟ್ ರಸ್ತೆಯು ಕಡಿದಾದ ತಿರುವುಗಳಿಂದ ಕೂಡಿದ್ದು, ಕೆಲವು ಕಡೆ ತುಂಬಾ ಕಿರಿದಾಗಿದೆ. ಭಾರೀ ಮಳೆಯಿಂದಾಗಿ ಬೃಹತ್ ಗಾತ್ರದ ಮರಗಳು ಧರೆಗುರುಳುವುದರ ಜೊತೆಗೆ ಭೂ ಕುಸಿತವು ಉಂಟಾಗುವ ಸಂಭವ ಇದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ರಾ.ಹೆ. 73ರ ಮಂಗಳೂರು-ತುಮಕೂರು ರಸ್ತೆಯ ಕಿ.ಮೀ. 75ರಿಂದ (ಚಾರ್ಮಾಡಿ ಗ್ರಾಮ) ಕಿ.ಮೀ. 86.20 (ದ.ಕ. ಜಿಲ್ಲಾ ಗಡಿ) ವರೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ತಕ್ಷಣದಿಂದ ಜಾರಿ ಬರುವಂತೆ ಎಲ್ಲ ರೀತಿಯ ವಾಹನಗಳನ್ನು ಸಂಜೆ 7ರಿಂದ ಬೆಳಗ್ಗೆ 6 ಗಂಟೆವರೆಗೆ ಈ ನಿರ್ಬಂಧ ಇರಲಿದೆ. ಈ ಆದೇಶವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಸಂಚರಿಸಬಹುದಾದ ವಾಹನಗಳು: ಸಾರ್ವಜನಿಕರು ಸಂಚರಿಸುವ ಕೆಎಸ್ಸಾರ್ಟಿಸಿ ಕೆಂಪು ಬಸ್, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೊ ಟ್ರಾವೆಲರ್ಸ್, ಆ್ಯಂಬುಲೆನ್ಸ್, ಕಾರು, ಜೀಪು, ವ್ಯಾನ್, ಎಲ್‌ಸಿವಿ (ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು ಬೆಳಗ್ಗೆ 6ರಿಂದ ಸಂಜೆ 7 ಗಂಟೆವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

ನಿರ್ಬಂಧಿಸಲಾದ ವಾಹನಗಳು: ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೊ ಕಂಟೈನರ್, ಲಾಂಗ್ ಚಾಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಟ್ರಕ್ ಟ್ರೈಲರ್, ಕೆಎಸ್ಸಾರ್ಟಿಸಿ ರಾಜಹಂಸ ಮತ್ತು ಎಲ್ಲ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳು ದಿನದ 24 ಗಂಟೆಯೂ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ತುರ್ತು ವೈದ್ಯಕೀಯ ಸಂದರ್ಭದಲ್ಲಿ ಆ್ಯಂಬುಲೆನ್ಸ್/ ಆಕ್ಸಿಜನ್ ವಿತರಣಾ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ 2021ರ ಎಪ್ರಿಲ್ 9ರಂದು ಹೊರಡಿಸಿದ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News