ವಿಶಾಲ ಗಾಣಿಗ ಕೊಲೆ ಪ್ರಕರಣ: ಆರೋಪಿ ಪತಿಗೆ ನ್ಯಾಯಾಂಗ ಬಂಧನ
ಉಡುಪಿ, ಜು.22: ಬ್ರಹ್ಮಾವರ ಕುಮ್ರಗೋಡಿನ ಫ್ಲ್ಯಾಟ್ ನಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಕೆಯ ಪತಿ ರಾಮಕೃಷ್ಣ ಗಾಣಿಗ(42)ನನ್ನು ಉಡುಪಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಜು.19ರಂದು ರಾಮಕೃಷ್ಣನನ್ನು ಬಂಧಿಸಿದ್ದ ಪೊಲೀಸರು ಜು.20ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹೆಚ್ಚಿನ ತನಿಖೆಗಾಗಿ ರಾಮಕೃಷ್ಣನನ್ನು ನ್ಯಾಯಾಲಯ ಜು.23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು. ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಆ.2ರವರೆಗೆ ಪೊಲೀಸ್ ಕಸ್ಟಡಿ: ಇನ್ನೋರ್ವ ಬಂಧಿತ ಸುಪಾರಿ ಹಂತಕ ಉತ್ತರ ಪ್ರದೇಶದ ಗೋರಖಪುರ ನಿವಾಸಿ ಸ್ವಾಮಿನಾಥ ನಿಶಾದ (38)ನನ್ನು ಪೊಲೀಸರು ಆ.2ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಈತನನ್ನು ಹೆಚ್ಚಿನ ತನಿಖೆಗಾಗಿ ಹಾಗೂ ಮಹಜರು ನಡೆಸಲು ಪೊಲೀಸರು ಬೆಂಗಳೂರು, ಮುಂಬೈ, ಉತ್ತರ ಪ್ರದೇಶಗಳಿಗೆ ಕರೆದುಕೊಂಡು ಹೋಗಲಿದ್ದಾರೆ. ಅದೇ ರೀತಿ ತಲೆಮರೆಸಿಕೊಂಡು ಇನ್ನೋರ್ವ ಸುಪಾರಿ ಹಂತಕ ಸುಳಿವು ಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
''ವಿಶಾಲ ಗಾಣಿಗ ಅವರ ಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇನ್ನು ಕೂಡ ಆತ ಕೊಲೆಗೆ ನಿಖರವಾದ ಕಾರಣ ತಿಳಿಸಿಲ್ಲ. ಇನ್ನು ಸುಪಾರಿ ಹಂತಕ ರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾಗಿದೆ. ಆ ನಿಟ್ಟಿನಲ್ಲಿ ಆತನನ್ನು ವಿಚಾರ ಣೆಗೆ ಒಳಪಡಿಸಲಾಗುವುದು. ಇನ್ನೋರ್ವ ಸುಪಾರಿ ಹಂತಕ ನನ್ನು ಶೀಘ್ರವೇ ಬಂಧಿಸಲಾಗುವುದು''.
-ಎನ್. ವಿಷ್ಣುವರ್ಧನ್, ಎಸ್ಪಿ ಉಡುಪಿ