​ವರುಣನ ಆರ್ಭಟಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಮೃತ್ಯು, ಮತ್ತಿಬ್ಬರು ನೀರುಪಾಲು

Update: 2021-07-23 17:48 GMT

ಕಾರವಾರ, ಜು.23: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣ ಆರ್ಭಟದಿಂದಾಗಿ ಜನರು ತತ್ತರಿಸಿದ್ದಾರೆ. ಅನೇಕ ಕಡೆಗಳಲ್ಲಿ ಹಾನಿ ಸೇರಿ ದಂತೆ ಜನರ ರಕ್ಷಣೆಗಾಗಿ ಸೀ ಬರ್ಡ್ ಮೂಲಕ ಹೆಲಿಕಾಪ್ಟರ್ ಸಹಕಾರ ಪಡೆದ ಘಟನೆ ಶುಕ್ರವಾರ ವರದಿಯಾಗಿದೆ.

ಅದರಂತೆ ಕೊಡಸಳ್ಳಿ, ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಮಲ್ಲಾಪುರ ಗ್ರಾಮ ಮುಳುಗಡೆ ಭೀತಿ ಎದುರಾಗಿದ್ದು, ಅಂಕೋಲಾ ತಾಲೂಕಿನಲ್ಲಿ ಗಂಗಾವಳಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ 10ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿದೆ.

ಗಂಗಾವಳಿ ನದಿಯ ಆರ್ಭಟದಿಂದ ಅಂಕೋಲಾ ತಾಲೂಕಿನ ಶಿರೂರು ಗ್ರಾಮ ಸಂಪೂರ್ಣ ಮುಳುಗಡೆಯಾಗಿದ್ದು, ಸಂತ್ರಸ್ತರನ್ನು ರಕ್ಷಿಸಿ ಕರೆ ತರುತ್ತಿದ್ದ ದೋಣಿಯೊಂದು ಮಗುಚಿದ ಪರಿಣಾಮ ಓರ್ವ ಪುರುಷ ಹಾಗೂ ಓರ್ವ ಮಹಿಳೆ ನೀರು ಪಾಲಾಗಿದ್ದಾರೆ. ಬೀರು ಮುರು ಗೌಡ (67) ಹಾಗೂ ಗಂಗಾಧರ ಗೌಡ (33) ಎಂಬವರು ನೀರು ಪಾಲಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ತಾಲೂಕಿನಲ್ಲಿ ಜಲಾವೃತ್ತಗೊಂಡಿರುವ ವಿವಿಧ ಗ್ರಾಮೀಣ ಪ್ರದೇಶಕ್ಕೆ ಶಾಸಕಿ ರೂಪಾಲಿ ನಾಯ್ಕ ಕುಮಟಾ ಉಪ ವಿಭಾಗಾಧಿಕಾರಿ ರಾಹುಲ್ ಆರ್.ಪಾಂಡೆ, ತಹಶೀಲ್ದಾರ್ ಉದಯ ಕುಂಬಾರ, ಕಂದಾಯ ನಿರೀಕ್ಷಕ ರಾದ ಸುರೇಶ ಹರಿಕಂತ್ರ, ಅಮರ ನಾಯ್ಕ, ರಾಘವೇಂದ್ರ ಜನ್ನು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು.

ಹೊನ್ನಾವರದ ಶರಾವತಿ ನದಿಯಲ್ಲಿ ದೋಣಿ ಮಗುಚಿದ ಪರಿಣಾಮ ತೆರಳುತ್ತಿದ್ದ ಪತಿ-ಪತ್ನಿ ನೀರಿನಲ್ಲಿ ಬಿದ್ದಿದ್ದು, ಪತಿ ಸುಬ್ರಾಯ ಅಂಬಿಗ ಈಜಿ ದಡ ಸೇರಿದ್ದಾರೆ. ಆದರೆ ಪತ್ನಿ ಮಾದೇವಿ ಅಂಬಿಗ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಶಿರಸಿಯಲ್ಲಿ ಬೈಕ್ ಸವಾರ ಗಂಗಾಧರ ಗೌಡ (28) ನೀರಿನ ಸೆಳೆತಕ್ಕೆ ಸಿಲುಕಿ ಚಿನ್ನಾಪುರ ಕೆರೆಗೆ ಬೈಕ್ ಸಮೇತ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕದ್ರಾ ಜಲಾಶಯದಲ್ಲಿ ನೀರು ಬಿಡುಗಡೆ ಮಾಡಲಾಗಿದ್ದರಿಂದ ಕಾರವಾರ ತಾಲೂಕಿನ ಮಲ್ಲಾಪುರ ಹಾಗೂ ಕೈಗಾ ಟೌನ್‌ಶಿಪ್ ಹಾಗೂ ಸುತ್ತಮುತ್ತಲಿನ ಜನವಸತಿ ಪ್ರದೇಶ ಜಲಾವೃತಗೊಂಡಿದೆ. ಜಲಾಶಯದಿಂದ ನಿರಂತರವಾಗಿ ನೀರು ಬಿಡುಗಡೆ ಮಾಡಲಾಗಿದ್ದು, ಜನರು ಮತ್ತಷ್ಟು ಆತಂಕದಲ್ಲಿದ್ದಾರೆ. ಕಾಳಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಕೊಡಸಳ್ಳಿ ಹಾಗೂ ಕದ್ರಾ ಆಣೆಕಟ್ಟುಗಳಿಂದ 2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ಹೊರಬಿಡಲಾಗುತ್ತಿದ್ದು, ಪರಿಣಾಮ ಕದ್ರಾ ಜಲಾಶಯದ ಕೆಳಭಾಗದ ನದಿದಡದ ಹಲವಾರು ಗ್ರಾಮಗಳು ಜಲಾವೃತವಾಗಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ನೆರವಿಗೆ ಅಗ್ನಿಶಾಮಕ ದಳ ಹಾಗೂ ನೌಕಾದಳದ ತಂಡವು ದೋಣಿಗಳ ಮೂಲಕ ನೆರವಿಗೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮಲ್ಲಾಪುರ, ಕೆರವಡಿ, ಕಿನ್ನರ, ಉಳಗಾ ಸೇರಿದಂತೆ ಹಲವು ಗ್ರಾಮಗಳ ಸಂತ್ರಸ್ತರನ್ನು ಕಾಳಜಿ ಕೇಂದ್ರಗಳಿಗೆ ರವಾನಿಸಲಾಗುತ್ತಿದೆ.

ಕಾರವಾರದ ಕಾಳಿ, ಕುಮಟಾದ ಅಘನಾಶಿನಿ ಹಾಗೂ ಅಂಕೋಲಾದ ಗಂಗಾವಳಿ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ನದಿದಡದ ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದು, ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಅಂಕೋಲಾದ ಸುಂಕಸಾಳ ಬಳಿ ಗಂಗಾವಳಿ ನೀರು ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಇನ್ನು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಗುಡ್ಡಕುಸಿತ ಉಂಟಾಗಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಪರಿಣಾಮವಾಗಿ ಯಲ್ಲಾಪುರದಲ್ಲಿ ಹಾಗೂ ಅಂಕೋಲಾದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ವಾಹನ ಚಾಲಕರು ಹಾಗೂ ಸಹಾಯಕರು ಆಹಾರಕ್ಕಾಗಿ ಪರದಾಡುವಂತಾಗಿದೆ.

ಅಂಕೋಲಾ ತಾಲೂಕಿನ ಡೋಂಗ್ರಿ ಭಾಗದಲ್ಲಿ ಹಲವಾರು ಮಂದಿ ಸಿಲುಕಿದ್ದು, ಗಂಗಾವಳಿ ರಭಸದಿಂದ ಹರಿಯುತ್ತಿರುವುದರಿಂದ ಅಲ್ಲಿಗೆ ದೋಣಿಯ ಮೂಲಕ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾಲೂಕಿನ ಹೊನ್ನಳ್ಳಿಯಲ್ಲಿ ಬೀಡು ಬಿಟ್ಟಿರುವ ಶಾಸಕಿ ರೂಪಾಲಿ ನಾಯ್ಕ ಅವರ ರಕ್ಷಣೆಗೆ ಹೆಲಿಕಾಪ್ಟರ್ ಬಳಸಲು ನೆರವನ್ನು ಕೋರುವುದಾಗಿ ತಿಳಿಸಿದ್ದು, ಈಗಾಗಲೇ ಈ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ. ಮಳೆ ಇಲ್ಲದ ಕಾರಣ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಬಂಗಾರೇಶ್ವರ ದೇವಾಲಯ ಮುಳುಗಡೆ

ಶಿರಸಿ ತಾಲೂಕಿನ ಗುಡ್ನಾಪುರ ಕೆರೆ ಭರ್ತಿಯಾಗಿದ್ದು, ಪ್ರಸಿದ್ಧ ಬಂಗಾರೇಶ್ವರ ದೇವಾಲಯ ಮುಳುಗಡೆಯಾಗಿದ್ದರಿಂದ ಪೂಜೆ ನಿಲ್ಲಿಸಲಾಗಿದೆ. ಶಿರಸಿ ಪಟ್ಟಣದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಇನ್ನು ಗುಡ್ಡ ಕುಸಿತ, ಸೇತುವೆ ಮುಳುಗಡೆ ಕಾರಣಗಳಿಂದಾಗಿ ಸಿದ್ದಾಪುರದಿಂದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ಸಂಚಾರ ಸ್ಥಗಿತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ.

ಜನರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ

ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಮಧ್ಯೆ ನೆರೆಯ ತೀವ್ರತೆಯಿಂದಾಗಿ ಸುಂಕಸಾಳ ಹೈಲ್ಯಾಂಡ್ ಹೊಟೇಲ್ ಬಳಿ 8 ಅಡಿ ಹೆಚ್ಚು ನೀರು ಹೆದ್ದಾರಿಯಲ್ಲಿ ಹರಿಯುತ್ತಿದ್ದು, ಇಲ್ಲಿರುವ 8 ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿ ಅಂಕೋಲಾಕ್ಕೆ ಕರೆತರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News