ಲಿಂಗಾಯತ ಸ್ವಾಮೀಜಿಗಳು ಯಾಕೆ ರಾಜಕೀಯ ಮಾತನಾಡಬಾರದು?

Update: 2021-07-24 04:45 GMT

ಕರ್ನಾಟಕದ ರಾಜಕೀಯವನ್ನು ಲಿಂಗಾಯತ ಮತ್ತು ಒಕ್ಕಲಿಗ ಶಕ್ತಿಗಳು ನಿಯಂತ್ರಿಸುತ್ತಿರುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಆಯಾ ಜಾತಿಯ ಸ್ವಾಮೀಜಿಗಳು ಕಾಲ ಕಾಲಕ್ಕೆ ತಮ್ಮ ಸಮುದಾಯದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಸರಕಾರದೊಂದಿಗೆ ಕೊಡುಕೊಳ್ಳುವಿಕೆಯನ್ನು ನಡೆಸುತ್ತಾ ಬಂದಿದ್ದಾರೆ. ಒಕ್ಕಲಿಗ ಜಾತಿಯನ್ನು ಅವರ ಸ್ವಾಮೀಜಿ ಮತ್ತು ಮಠಗಳ ಮೂಲಕ ತನ್ನ ಹಿಂದುತ್ವದ ರಾಜಕಾರಣಕ್ಕೆ ಆರೆಸ್ಸೆಸ್ ಸಾಧ್ಯವಾದಷ್ಟು ಬಳಸಿಕೊಂಡು ಬಂದಿದೆ. ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ಬಳಸಿಕೊಂಡು ಆರೆಸ್ಸೆಸ್ ಲಿಂಗಾಯತ ಧರ್ಮವನ್ನೂ ಸಾಧ್ಯವಾದಷ್ಟು ವೈದಿಕೀಕರಣಗೊಳಿಸಿದೆ. ಆದರೂ ಲಿಂಗಾಯತ ಧರ್ಮದ ಅಡಿಗಲ್ಲು ಗಟ್ಟಿಯಾಗಿದ್ದುದರಿಂದ ಅದು ಸಂಪೂರ್ಣವಾಗಿ ವೈದಿಕಶಾಹಿಯ ಬಲೆಗೆ ಬಿದ್ದಿಲ್ಲ. ಇಂದಿಗೂ ಲಿಂಗಾಯತರ ಧಾರ್ಮಿಕ ಆಚರಣೆ, ವಿಧಿ ವಿಧಾನಗಳನ್ನು ಲಿಂಗಾಯತ ಸ್ವಾಮೀಜಿಗಳೇ ನಿಯಂತ್ರಿಸುತ್ತಾರೆ. ಕರ್ನಾಟಕದಲ್ಲಿ ಆರೆಸ್ಸೆಸ್ ಸಿದ್ಧಾಂತ ಪೂರ್ಣ ಪ್ರಮಾಣದಲ್ಲಿ ವಿಜೃಂಭಿಸಲು ಸಾಧ್ಯವಾಗದೇ ಇರುವುದಕ್ಕೆ, ಈ ನೆಲದಲ್ಲಿ ಬೇರು ಬಿಟ್ಟಿರುವ ಲಿಂಗಾಯತ ತತ್ವವೇ ಮುಖ್ಯ ಕಾರಣ.

ಆರೆಸ್ಸೆಸ್‌ನೊಳಗಿನ ಬ್ರಾಹ್ಮಣ್ಯ ಲಾಬಿ ಲಿಂಗಾಯತರಿಂದ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಾ ಬಂದಿದ್ದರೂ ಅದರಲ್ಲಿ ಈವರೆಗೆ ಯಶಸ್ವಿಯಾಗಿಲ್ಲ. ಒಂದು ವೇಳೆ ಯಶಸ್ವಿಯಾಗಿದ್ದರೆ, ಅನಂತಕುಮಾರ್ ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿ ಇತಿಹಾಸದಲ್ಲಿ ದಾಖಲಾಗುತ್ತಿದ್ದರು. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ತನ್ನ ಬದುಕಿನುದ್ದಕ್ಕೂ ಹೋರಾಡಿದ್ದ ಯಡಿಯೂರಪ್ಪ, ಅದಕ್ಕಾಗಿ ಲಿಂಗಾಯತ ತತ್ವ ಸಿದ್ಧಾಂತದ ಜೊತೆಗೂ ರಾಜಿಯಾಗಿದ್ದರು. ಲಿಂಗಾಯತ ಸಮುದಾಯವನ್ನು ರಾಜಕೀಯ ಶಕ್ತಿಯಾಗಿ ಸಂಘಟಿಸಿ, ಬಿಜೆಪಿಯಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ತನ್ನನ್ನು ಮುಖ್ಯಮಂತ್ರಿಯಾಗಿಸಿದ ಸಮುದಾಯಕ್ಕಾಗಿ ಯಡಿಯೂರಪ್ಪ ಸಹಜವಾಗಿಯೇ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇದೀಗ ಭ್ರಷ್ಟಾಚಾರವನ್ನು ಮುಂದಿಟ್ಟು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಕಾರ್ಯಾಚರಣೆ ಆರೆಸ್ಸೆಸ್‌ನಿಂದ ಭರ್ಜರಿಯಾಗಿ ನಡೆಯುತ್ತಿದೆ. ಆ ಮೂಲಕ ರಾಜ್ಯ ರಾಜಕಾರಣ ಲಿಂಗಾಯತ ಶಕ್ತಿಯ ಕೈಯಿಂದ ಬ್ರಾಹ್ಮಣ್ಯ ಶಕ್ತಿಯ ಕೈಗೆ ಹಸ್ತಾಂತರವಾಗಲಿದೆ ಅಥವಾ ಆರೆಸ್ಸೆಸ್ ತನ್ನ ಮೂಗಿನ ನೇರಕ್ಕೆ ಕುಣಿಯುವ ಒಕ್ಕಲಿಗ ಅಥವಾ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಲಿದೆ. ರಾಜಕೀಯ ಸೂತ್ರವನ್ನು ಮಾತ್ರ ತನ್ನ ಕೈಯಲ್ಲೇ ಉಳಿಸಿಕೊಳ್ಳಲಿದೆ. ಇದೀಗ ಇದರ ವಿರುದ್ಧ ಪ್ರಮುಖ ಲಿಂಗಾಯತ ಸ್ವಾಮೀಜಿಗಳು ಬಹಿರಂಗವಾಗಿ ಬಂಡೆದ್ದಿದ್ದಾರೆ. ಯಡಿಯೂರಪ್ಪ ಅವರಿಗೆ ಪೂರ್ಣ ಪ್ರಮಾಣದ ಬೆಂಬಲವನ್ನು ಬಹಿರಂಗವಾಗಿಯೇ ನೀಡಿದ್ದಾರೆ.

ವಿಪರ್ಯಾಸವೆಂದರೆ, ಲಿಂಗಾಯತ ಸ್ವಾಮೀಜಿಗಳು ಯಡಿಯೂರಪ್ಪರಿಗೆ ಬೆಂಬಲ ಘೋಷಿಸಿದ ಬೆನ್ನಿಗೇ ಅದೇನೋ ಅನಾಹುತವಾದಂತೆ ಮಾಧ್ಯಮಗಳು ಸ್ವಾಮೀಜಿಗಳನ್ನು ಟೀಕಿಸುವುದಕ್ಕೆ ಶುರು ಹಚ್ಚಿವೆ. ಈ ದೇಶದಲ್ಲಿ ಸ್ವಾಮೀಜಿಗಳು ಇದೇ ಮೊದಲ ಬಾರಿಗೆ ರಾಜಕೀಯ ಮಾತನಾಡುತ್ತಿದ್ದ್ದಾರೇನೋ ಎಂಬಂತೆ ಅವರನ್ನು ವಿಶ್ಲೇಷಿಸುತ್ತಿವೆ. ಸ್ವಾಮೀಜಿಗಳನ್ನು ವ್ಯಂಗ್ಯವಾಡುತ್ತಿವೆ. ‘ರಾಜಕೀಯಕ್ಕೆ ಸೇರಲಿ’ ಎಂಬಿತ್ಯಾದಿ ಸಲಹೆಗಳನ್ನು ಸ್ವಾಮೀಜಿಗಳಿಗೆ ನೀಡುತ್ತಿದ್ದಾರೆ.ನಮ್ಮ ದೇಶದಲ್ಲಿರುವ ಯಾವುದೇ ಮಠಮಾನ್ಯಗಳು ರಾಜಕೀಯದಿಂದ ದೂರ ಉಳಿದಿರುವ ಉದಾಹರಣೆಗಳೇ ನಮ್ಮ ಮುಂದೆ ಇಲ್ಲ. ಇಂದಿನ ಸ್ವಾಮೀಜಿಗಳೆಲ್ಲ ವೇದಿಕೆ ಏರಿದರೆ ಅಧ್ಯಾತ್ಮದ ಮಾತನಾಡುವುದಕ್ಕಿಂತ ರಾಜಕೀಯ ಮಾತನಾಡುವುದೇ ಅಧಿಕ. ಕೆಲವು ಸ್ವಾಮೀಜಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವುದೇ ದ್ವೇಷ ರಾಜಕಾರಣದ ಮಾತುಗಳ ಮೂಲಕ. ಹಿಂದೆ ಪೇಜಾವರ ಶ್ರೀಗಳು ಬ್ರಾಹ್ಮಣರ ಪರವಾಗಿ ಮಾತನಾಡಿದಾಗ ಯಾರೂ ಅದನ್ನು ‘ಜಾತಿ ರಾಜಕೀಯ’ ಎಂದು ಕರೆದಿರಲಿಲ್ಲ. ಇಷ್ಟಕ್ಕೂ ವೈದಿಕ ಸ್ವಾಮೀಜಿಗಳು ತಮ್ಮ ಸಮುದಾಯದ ಪರವಾಗಿ ಮಾತನಾಡುವಾಗ ಜಾಣತನದಿಂದ ‘ಬ್ರಾಹ್ಮಣ’ ಎನ್ನುವ ಬದಲು ‘ಹಿಂದೂ’ ಪದಗಳನ್ನು ಬಳಸಿ ಬಚಾವಾಗುತ್ತಾರೆ.

ಆದುದರಿಂದಲೇ ಪೇಜಾವರ ಶ್ರೀಗಳು ಬ್ರಾಹ್ಮಣ್ಯದ ಪರವಾಗಿ ರಾಜಕೀಯ ಮಾಡುವಾಗಲೂ ಅದು ‘ಜಾತಿ ರಾಜಕಾರಣ’ವಾಗಿ ಗುರುತಿಸಲ್ಪಡುವುದಿಲ್ಲ. ಪೇಜಾವರಶ್ರೀಗಳು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದರು. ಆದರೂ ಮಾಧ್ಯಮಗಳು ‘ಸ್ವಾಮೀಜಿಗಳಾಗಿ ನೀವೇಕೆ ರಾಜಕೀಯದಲ್ಲಿ ಗುರುತಿಸುತ್ತೀರಿ?’ ಎಂದು ಕೇಳಿರಲಿಲ್ಲ. ಪದೇ ಪದೇ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದರೂ ಮಾಧ್ಯಮಗಳು ಅವರನ್ನು ಟೀಕಿಸಿರಲಿಲ್ಲ. ಅಷ್ಟೇ ಏಕೆ, ಇಂದು ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರಕಾರ ‘ಧರ್ಮ ಮತ್ತು ಸನ್ಯಾಸಿ’ಗಳನ್ನು ಧಾರಾಳವಾಗಿ ಬಳಸಿಕೊಂಡು ಬಂದಿದೆ. ಆರೆಸ್ಸೆಸ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ವೈದಿಕ ಸ್ವಾಮೀಜಿಗಳ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಇಲ್ಲಿ ರಾಜಕೀಯ ನಡೆಸಬೇಕಾದರೆ ನಿರ್ದಿಷ್ಟ ಜಾತಿಯ ಸ್ವಾಮೀಜಿಗಳಿಗಷ್ಟೇ ಅವಕಾಶವಿದೆ. ಉಳಿದವರು ರಾಜಕೀಯ ನಡೆಸಿದರೆ ಅದು ‘ಜಾತಿ ರಾಜಕಾರಣ’ವಾಗಿ ಟೀಕಿಸಲ್ಪಡುತ್ತದೆ. ಪೇಜಾವರ ಶ್ರೀಗಳ ಶಿಷ್ಯೆ ಉಮಾಭಾರತಿ ಸನ್ಯಾಸಿಯಾಗಿಯೇ ರಾಜಕೀಯ ದ್ವೇಷ ಭಾಷಣ ಮಾಡಿ, ಸರಕಾರದಲ್ಲಿ ಅತಿ ದೊಡ್ಡ ಸ್ಥಾನಗಳನ್ನು ತನ್ನದಾಗಿಸಿಕೊಂಡಾಗ ‘ಕಾವಿಗೆ ಅವಮಾನವಾಯಿತು’ ಎಂದು ಯಾರಿಗೂ ಅನ್ನಿಸಿರಲಿಲ್ಲ.

‘ಇನ್ನೊಂದು ಧರ್ಮದ ಮಹಿಳೆಯರನ್ನು ಅತ್ಯಾಚಾರ ಮಾಡುತ್ತೇವೆ’ ಎಂದುಸಾರ್ವಜನಿಕವಾಗಿ ಬಹಿರಂಗವಾಗಿ ಭಾಷಣ ಮಾಡುತ್ತಲೇ ಜನಪ್ರಿಯರಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ಏರಿದ ಆದಿತ್ಯನಾಥ್‌ನನ್ನು ಕೆಲವು ಮಾಧ್ಯಮಗಳು ಹೆಮ್ಮೆಯಿಂದ ಯೋಗಿ ಎಂದು ಬಣ್ಣಿಸುತ್ತವೆ. ‘ಯೋಗಿಗೇಕೆ ರಾಜಕೀಯ?’ ಎಂದು ಯಾರೂ ಕೇಳಲಿಲ್ಲ. ಅಷ್ಟೇ ಏಕೆ, ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾದ ಆರೋಪ ಹೊತ್ತ ಪ್ರಜ್ಞಾಸಿಂಗ್‌ರನ್ನೂ ‘ಸಾಧ್ವಿ’ ಎನ್ನುವಾಗ ಯಾರಿಗೂ ಮುಜುಗರವಾಗುವುದಿಲ್ಲ. ಆದರೆ ಲಿಂಗಾಯತ ಸ್ವಾಮೀಜಿಗಳು ಯಡಿಯೂರಪ್ಪರ ಪರವಾಗಿ ಬಹಿರಂಗವಾಗಿ ಮಾತನಾಡಿದಾಗ ‘ಕಾವಿ’ ‘ಸನ್ಯಾಸಿ’ಗಳ ಹೊಣೆಗಾರಿಕೆಗಳ ಬಗ್ಗೆ ರಾಜಕಾರಣಿಗಳು, ಮಾಧ್ಯಮಗಳು ಚರ್ಚಿಸುತ್ತವೆ. ‘ಸನ್ಯಾಸಿಗಳು ರಾಜಕಾರಣಿಗಳ ಪರವಾಗಿ ಮಾತನಾಡಬಾರದು’ ಎಂಬ ಆದೇಶಗಳು ಹೊರ ಬರುತ್ತವೆ. ಲಿಂಗಾಯತ ಸಮುದಾಯದ ಸ್ವಾಮೀಜಿಗಳು ತಮ್ಮ ಸಮುದಾಯದ ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಹಲವು ಮೆಡಿಕಲ್ ಕಾಲೇಜುಗಳನ್ನು, ವಿದ್ಯಾಮಂದಿರಗಳನ್ನು ತೆರೆದಿದ್ದಾರೆ. ಇತರ ಸಮುದಾಯದ ಜನರೂ ಅದರಿಂದ ಪ್ರಯೋಜನಗಳನ್ನು ಪಡೆದಿದ್ದಾರೆ. ವೈದಿಕ ಮಠಗಳು, ಸ್ವಾಮೀಜಿಗಳು ಈ ಪ್ರಮಾಣದಲ್ಲಿ ಜಾತ್ಯತೀತವಾಗಿ ಕೊಡುಗೆಗಳನ್ನು ಕೊಟ್ಟ ಇತಿಹಾಸವಿಲ್ಲ. ತನ್ನ ಸಮುದಾಯದ ಜನರೊಂದಿಗೆ ನೇರ ಸಂವಹನವನ್ನು ಹೊಂದಿರುವ ಲಿಂಗಾಯತ ಸ್ವಾಮೀಜಿಗಳೊಂದಿಗೆ ರಾಜಕಾರಣಿಗಳು ಸಹಜವಾಗಿಯೇ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ತನ್ನ ಸಮುದಾಯದ ಅಭಿವೃದ್ಧಿಗಾಗಿ ಒಬ್ಬ ನಾಯಕ ಕೆಲಸ ಮಾಡಿದ್ದಾನೆ ಎಂದರೆ, ಅವನ ಜೊತೆಗೆ ನಿಲ್ಲುವುದು ಸ್ವಾಮೀಜಿಗಳಿಗೆ ಅನಿವಾರ್ಯವಾಗಬಹುದು.

ಲಿಂಗಾಯತ ಸ್ವಾಮೀಜಿಗಳ ಕೆಲಸ ಮಂತ್ರ ಹೇಳುತ್ತಾ ಅರ್ಚನೆ, ಉಪನಯನದಂತಹ ಕಾರ್ಯಕ್ರಮಗಳಿಗೆ ಸೀಮಿತರಾಗಿ ಉಳಿದುಕೊಳ್ಳುವುದು ಅಲ್ಲ. ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಬಲವಾಗಿ ನಂಬಿರುವ ಇವರು ಸಹಜವಾಗಿಯೇ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಳ್ಳುತ್ತಾರೆ. ಬಸವಣ್ಣನನವರು ಬಿಜ್ಜಳನ ಮಂತ್ರಿಯಾಗಿದ್ದರು ಎಂಬ ಅಂಶವನ್ನು ನಾವು ಮರೆಯಬಾರದು. ರಾಜಕೀಯ ಸಂಚಿನಮನೆಯೊಳಗೆ ಅವರೂ ಗುರುತಿಸಿಕೊಂಡಿದ್ದರು.

ಲಿಂಗಾಯತ ಲಾಬಿಯ ಕೈಯಿಂದ ರಾಜ್ಯದ ಚುಕ್ಕಾಣಿಯನ್ನು ಆರೆಸ್ಸೆಸ್ ಕೈವಶ ಮಾಡುತ್ತಿದೆ ಎಂದರೆ ಅದರ ಅರ್ಥ, ರಾಜ್ಯದ ಸೂತ್ರ ಸಂಪೂರ್ಣವಾಗಿ ಉತ್ತರ ಭಾರತದ ಕೈಗೆ ಹಸ್ತಾಂತರವಾಗುತ್ತದೆ ಎನ್ನುವುದಾಗಿದೆ. ಲಿಂಗಾಯತ ರಾಜಕಾರಣಕ್ಕೆ ಪರೋಕ್ಷವಾಗಿ ಕನ್ನಡತನದೊಂದಿಗೆ, ಪ್ರಾದೇಶಿಕತೆಯೊಂದಿಗೆ ನೇರ ಸಂಬಂಧವಿದೆ. ಲಿಂಗಾಯತ ಧರ್ಮ ಕರ್ನಾಟಕದ ಪ್ರಮುಖ ಐಡೆಂಟಿಟಿಯಲ್ಲಿ ಒಂದು. ಲಿಂಗಾಯತ ಧರ್ಮ ಹುಟ್ಟಿದ್ದು ಕರ್ನಾಟಕದಲ್ಲಿ. ಶರಣರ ಬಾಯಿಯಿಂದ ವಚನಗಳು ಉದುರಿದ್ದು ಕನ್ನಡದಲ್ಲಿ. ಆದುದರಿಂದಲೇ ಅದು ಕರ್ನಾಟಕದ ಅಸ್ಮಿತೆಯ ಭಾಗವಾಗಿದೆ.ಲಿಂಗಾಯತ ಸ್ವಾಮೀಜಿಗಳನ್ನು ಟೀಕಿಸುವ ಸಂದರ್ಭದಲ್ಲಿ ಈ ಅಂಶವನ್ನು ನಾವು ಮರೆಯಬಾರದು.

ಆರೆಸ್ಸೆಸ್‌ಗೆ, ವೈದಿಕ ರಾಜಕಾರಣಕ್ಕೆ ಲಿಂಗಾಯತ ಧರ್ಮ ರಾಜಕೀಯ ಶಕ್ತಿಯಾಗಿ ಸವಾಲನ್ನು ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಲಿಂಗಾಯತ ಸ್ವಾಮೀಜಿಗಳನ್ನು ಮಾತನಾಡದಂತೆ ತಡೆಯುವುದು, ಆರೆಸ್ಸೆಸ್‌ನ ರಾಜಕೀಯ ಅಜೆಂಡಾಗಳ ಜೊತೆಗೆ ಪರೋಕ್ಷವಾಗಿ ನಾವೂ ಕೈ ಜೋಡಿಸಿದಂತೆ. ಇಲ್ಲಿ ‘ಭ್ರಷ್ಟಾಚಾರ’ ಬಿಜೆಪಿಗೆ ಒಂದು ನೆಪ ಮಾತ್ರ. ಭ್ರಷ್ಟಾತಿಭ್ರಷ್ಟ ನಾಯಕರಿಂದ ತುಂಬಿ ಹೋಗಿರುವ ಬಿಜೆಪಿಗೆ ಬಗ್ಗು ಬಡಿಯಬೇಕಾಗಿರುವುದು ಭ್ರಷ್ಟಾಚಾರವನ್ನಲ್ಲ, ಲಿಂಗಾಯತ ರಾಜಕೀಯ ಇಚ್ಛಾಶಕ್ತಿಯನ್ನು. ಕರ್ನಾಟಕಕ್ಕೆ ಕೊಡಬೇಕಾದ ನ್ಯಾಯಯುತ ಪರಿಹಾರ ಹಣವನ್ನು ಬಾಕಿ ಉಳಿಸಿ, ಸರಕಾರವನ್ನು ಅಸಹಾಯಕವಾಗಿಸಿ, ಆಡಳಿತ ನಡೆಸಲು ಯಡಿಯೂರಪ್ಪರಿಗೆ ಸಾವಿರ ಬಗೆಯ ಅಡೆತಡೆಗಳನ್ನು ಒಡ್ಡಿ, ಅಂತಿಮವಾಗಿ ಎಲ್ಲ ವೈಫಲ್ಯಗಳನ್ನು ಯಡಿಯೂರಪ್ಪರ ತಲೆಗೆ ಕಟ್ಟುವ ಕೇಂದ್ರ ಬಿಜೆಪಿ ವರಿಷ್ಠರ ಪ್ರಯತ್ನ ಒಂದು ಪೂರ್ವಯೋಜಿತ ಸಂಚು. ನೆರೆಯಿಂದ ರಾಜ್ಯ ತತ್ತರಿಸಿದಾಗ, ಕೇಂದ್ರಕ್ಕೆ ಮನವರಿಕೆ ಮಾಡಿ, ಪರಿಹಾರವನ್ನು ತಂದುಕೊಡಬೇಕಾಗಿದ್ದ ಸಂಸದರು ‘ರಾಜ್ಯಕ್ಕೆ ಕೇಂದ್ರದಿಂದ ಪರಿಹಾರದ ಅಗತ್ಯವೇ ಇಲ್ಲ’ ಎಂದು ‘ಮೋದಿ’ಯ ಓಲೈಕೆಗಾಗಿ ರಾಜ್ಯದ ನೆರೆ ಸಂತ್ರಸ್ತರ ಹಿತಾಸಕ್ತಿಯನ್ನೇ ಬಲಿಕೊಟ್ಟರು. ಇಂಥವರ ಕೈಗೆ ರಾಜ್ಯದ ಚುಕ್ಕಾಣಿ ಕೊಡುವುದೆಂದರೆ, ಕರ್ನಾಟಕವನ್ನು ಸಂಪೂರ್ಣ ಗುಜರಾತಿನ ಜೀತಕ್ಕೆ ಒಪ್ಪಿಸಿದಂತೆಯೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News