ರೋಟರಿ ಪುತ್ತೂರು ಎಲೈಟ್‌ ಅಧ್ಯಕ್ಷರಾಗಿ ಮನ್ಸೂರ್ ಬೊಳುವಾರು ಆಯ್ಕೆ

Update: 2021-07-24 09:50 GMT
ಮನ್ಸೂರ್- ರಂಜಿತ್ ಮಥಾಯಸ್

ಪುತ್ತೂರು : ರೋಟರಿ ಪುತ್ತೂರು ಎಲೈಟ್‌ನ ಅಧ್ಯಕ್ಷರಾಗಿ ಬೊಳುವಾರು ಅಮನ್ ಟ್ರೇಡರ್ಸ್‌ನ ಮಾಲಕ ಮನ್ಸೂರ್ ಮತ್ತು ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್, ಕಾರ್ಯದರ್ಶಿಯಾಗಿ ಸುದಾನ ವಿದ್ಯಾಸಂಸ್ಥೆಯ ಐಟಿ ವಿಭಾಗದ ಮುಖ್ಯಸ್ಥ ರಂಜಿತ್ ಮಥಾಯಸ್, ಕೋಶಾಧಿಕಾರಿಯಾಗಿ ನವೀನ್ ಹನ್ಸ್ ಅವರು ಆಯ್ಕೆಯಾಗಿದ್ದಾರೆ.

ನಿಯೋಜಿತ ಅಧ್ಯಕ್ಷರಾಗಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಸಾರ್ಜೆಂಟ್ ಅಟ್ ಆರ್ಮ್ ನಿಧೀಶ್ ಎಚ್, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಮೌನೇಶ್ ವಿಶ್ವಕರ್ಮ, ಕಮ್ಯೂನಿಟಿ ನಿರ್ದೇಶಕರಾಗಿ ಅಬ್ದುಲ್ ಅಝೀಝ್, ಒಕೇಶನಲ್ ನಿರ್ದೇಶಕರಾಗಿ ಕಾರ್ಯಪ್ಪ ವಿ.ಪಿ, ಇಂಟರ್‌ ನ್ಯಾಷನಲ್ ನಿರ್ದೇಶಕರಾಗಿ ಅಶ್ವಿನ್ ಎಲ್. ಶೆಟ್ಟಿ, ಯೂತ್ ನಿರ್ದೇಶಕರಾಗಿ ಲವೀನಾ ಹನ್ಸ್, ಪೊಲಿಯೊ ವಿಭಾಗಕ್ಕೆ ಡಾ. ವಿಖ್ಯಾತ್, ಟಿಆರ್‌ಎಫ್‌ಗೆ ಸುಧೀರ್ ಬಿ, ಜಿಲ್ಲಾ ಪ್ರೊಜೆಕ್ಟ್‌ಗೆ ಈಶ್ವರ ಬೆಡೇಕರ್, ಸದಸ್ಯತನಕ್ಕೆ ಶಮೀರುದ್ದೀನ್, ಟಿ.ಇ.ಎ.ಸಿ.ಎಚ್‌ಗೆ ರಾಮ ಕೆ, ವಿನ್ಸ್‌ಗೆ ಜೋನ್ಸನ್ ಸಿ.ಎಮ್, ವೆಬ್‌ಗೆ ಸುಪ್ರಿತ್ ಮನೋರಾಜ್, ಸಿಎಲ್‌ಸಿಸಿಗೆ ಜೋಯಲ್ ಜೆ ಕುಟೀನಾ, ವಾಟರ್ ಮತ್ತು ಸೆನ್ಸೇಷನ್‌ಗೆ ಮುಹಮ್ಮದ್ ಅನ್‌ಸಾಫ್, ರೋಟರ್ಯಾಕ್ಟ್ ಗೆ ಆಸ್ಕರ್ ಆನಂದ್, ಇಂಟರ್ಯಾಕ್ಟ್ ಗೆ ಪದ್ಮಾವತಿ ಅವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರ ಪರಿಚಯ

ಬೊಳುವಾರು ಮರ್‌ಹೂಮ್ ಹಾಜಿ ಅಬ್ಬಾಸ್ ಮತ್ತು ಮೈಮೂನ ಅವರ ಪುತ್ರರಾಗಿರುವ ಮನ್ಸೂರ್ ಅವರು ಪ್ರಾಥಮಿಕ ಶಿಕ್ಷಣವನ್ನು ಬೊಳುವಾರು, ಹೈಸ್ಕೂಲ್ ಹಾಗು ಪಿ.ಯು. ಶಿಕ್ಷಣವನ್ನು ಕೊಂಬೆಟ್ಟು ಸರಕಾರಿ ಕಾಲೇಜಿನಲ್ಲಿ ಪಡೆದಿರುತ್ತಾರೆ.

ಪಿಯುಸಿಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್‌ ಗಳಿಸಿದ ಹಿರಿಮೆ ಇವರದಾಗಿದ್ದು, ಸಂತ ಫಿಲೋಮಿನ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಹಾಗೂ ಐಐಟಿಯಲ್ಲಿ ಕಂಪ್ಯೂಟರ್ ಪದವಿಯನ್ನು ಡಿಸ್ಟ್ರಿಂಕ್ಷನ್ ಅಂಕಗಳೊಂದಿಗೆ ಗಳಿಸಿದ ಹಾಗೂ ಐಎಟಿಎ ಪದವಿಯನ್ನು ಫೋರ್ ವಿಂಗ್ಸ್ ಮಂಗಳೂರುನಲ್ಲಿ ಪಡೆದಿರುತ್ತಾರೆ.

ರೆಡ್ ಗೈಸ್ ಸ್ಪೋರ್ಟ್ಸ್ ಕ್ಲಬ್ ಇದರ ಸ್ಥಾಪಕ ಅಧ್ಯಕ್ಷರಾಗಿ ಸತತ 19 ವರ್ಷಗಳಿಂದ ಕಾರ್ಯ ನಿರ್ವಹಿಸಿ ಕ್ರಿಕೆಟ್‌ನಲ್ಲಿ ಹಲವಾರು ಪ್ರಶಸ್ತಿ ಗಳನ್ನು ಪಡೆದಿರುತ್ತಾರೆ. ಇತರ ಸಂಸ್ಥೆಯೊಂದಿಗೆ ಸೇರಿ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಸಿ ಕೊಟ್ಟಿರುತ್ತಾರೆ. 20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ, ರಕ್ತದಾನಕ್ಕೆ ಪ್ರೇರೇಪಿಸಿದ್ದಾರೆ.

ಪುತ್ತೂರು ವರ್ತಕರ ಸಂಘದ ಸದಸ್ಯರಾಗಿರುವ ಮನ್ಸೂರ್ ಅವರು ಸಂಘದ ಕ್ರಿಕೆಟ್ ತಂಡದ ಕಪ್ತಾನರಾಗಿದ್ದಾರೆ. 2008 ರಲ್ಲಿ ಬೆಂಗಳೂರಿನಲ್ಲಿ ನಡೆದ ರೋಟರಿ ಮಲ್ಟಿ ಡಿಸ್ಟ್ರಿಕ್ಟ್ ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರಿನಿಂದ ಭಾಗವಹಿಸಿದ ಏಕೈಕ ರೋಟೇರಿಯನ್ ಆಟಗಾರ ಇವರು.

2019ರ ಹಾಸನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಇವರ ನೇತೃತ್ವದ ತಂಡ ಜಯಗಳಿಸಿತ್ತು. ಬರವಣಿಗೆ ಇವರ ಹವ್ಯಾಸವಾಗಿದ್ದು, 50ಕ್ಕೂ ಹೆಚ್ಚು ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಬೊಳುವಾರು ಹಾಗೂ ದರ್ಬೆಯಲ್ಲಿರುವ ಅಮಾನ್ ಟ್ರೇಡರ್ ಇದರ ಮಾಲಕರಾಗಿರುವ ಮನ್ಸೂರ್ ಅವರು ಪ್ರಸ್ತುತ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಬೊಳುವಾರಿನಲ್ಲಿ ವಾಸವಾಗಿದ್ದಾರೆ.

ರಂಜಿತ್ ಮಥಾಯಸ್ 

ರಂಜಿತ್ ರೆಯೂಲ್ ಮಥಾಯಸ್‌ ಅವರು ಬೆರ್ನಾಡ್ ಮಥಾಯಸ್ ಹಾಗೂ ಮಂದಾಕಿನಿ ಮಥಾಯಸ್ ದಂಪತಿಯ ಪುತ್ರ. 1983 - 89 ರಲ್ಲಿ ದೆಹಲಿಯಲ್ಲಿ ಪ್ರಾಥಮಿಕ ಶಿಕ್ಷಣ, ಉಡುಪಿಯ ಸೈಂಟ್ ಮೇರಿಸ್ ಇಂಗ್ಲಿಷ್ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದಿದ್ದಾರೆ.

ಪಿಯುಸಿ ಮತ್ತು ಬಿಕಾಂ ಪದವಿಯನ್ನು ಉಡುಪಿಯ ಪಿಪಿಸಿ ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು, ಎನ್‌ಸಿಸಿ ಮತ್ತು 1997 ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಮಾರ್ಚ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. 2000 ರಲ್ಲಿ ಮೈಸ್ ಮತ್ತು ಐಎಟಿಎ ಟಿಕೆಟಿಂಗ್ ಕೋರ್ಸ್ ಪೂರೈಸಿದ ಇವರು, 2004 ರಿಂದ 2016 ರವರೆಗೆ ನವದೆಹಲಿ,ಉಡುಪಿ, ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದು 2016 ರಲ್ಲಿ ಪುತ್ತೂರು ಸುದಾನ ವಿದ್ಯಾಸಂಸ್ಥೆಯ ಐಟಿ ವಿಭಾಗದ ಸಲಹೆಗಾರರಾಗಿ ನೇಮಕಗೊಂಡು, ಇದೀಗ ಐಟಿ ವಿಭಾಗದ ಮುಖ್ಯಸ್ಥ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪತ್ನಿ ಹಾಗು ಮೂವರು ಮಕ್ಕಳೊಂದಿಗೆ ಮಂಜಲ್ಪಡ್ಪುವಿನಲ್ಲಿ ವಾಸವಾಗಿದ್ದಾರೆ.

ನವೀನ್ ಹನ್ಸ್

ಕೋಶಾಧಿಕಾರಿ ನವೀನ್‌ಹನ್ಸ್ ಅವರು ದಿ. ಜಾಕೋಬ್ ಆಲಿವರ್ ಹನ್ಸ್ ಮತ್ತು ದಿ. ನ್ಯಾನ್ಸಿ ಮನೋರಮಾ ಅವರ 7ನೇ ಪುತ್ರ. ಕೂರ್ಗ್‌ನಲ್ಲಿ ತಮ್ಮ ಆರಂಭಿಕ ಶಾಲಾ ಶಿಕ್ಷಣ ಹಾಗೂ ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಮಂಗಳೂರಿನ ಬಲ್ಮಠ ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ತಮ್ಮ ಪ್ರಿಂಟಿಂಗ್ ಡಿಪ್ಲೊಮಾವನ್ನು ಪೂರೈಸಿದ ಇವರು ಹೊಸದಿಗಂತ, ಮುಂಗಾರು, ಹೊಸಸಂಜೆ, ಬ್ರಹ್ಮಗಿರಿ ಪತ್ರಿಕೆಗಳಲ್ಲಿ ಮಾತ್ರವಲ್ಲದೆ ರಾಜೇಶ್ ಪ್ರೆಸ್‌ನಲ್ಲಿ ಕೆಲಸ ನಿರ್ವಹಿಸಿದ ಅನುಭವ ಉಳ್ಳವರು. ಪ್ರಸ್ತುತ ಪುತ್ತೂರಿನಲ್ಲಿ ನವೀನ್ ಪ್ರಿಂಟರ್ ಎನ್ನುವ ತನ್ನದೇ ಆದ ಮುದ್ರಣಾಲಯವನ್ನು ಸ್ಥಾಪಿಸಿದ್ದು, ಪತ್ನಿ ಸುದಾನ ಶಾಲೆಯ ಶಿಕ್ಷಕಿ ಲವೀನಾ ರೊಸಾಲಿನ್ ಹನ್ಸ್‌ರ ಜೊತೆ ಬೊಳುವಾರಿನಲ್ಲಿ ವಾಸವಾಗಿದ್ದಾರೆ.

ರೋಟರಿ ಎಲೈಟ್ ಮೊದಲ ವರ್ಷವೇ ಅದ್ವಿತೀಯ ಸಾಧನೆ

2020 ರಲ್ಲಿ ಜನ್ಮ ತಾಳಿದ ರೋಟರಿ ಪುತ್ತೂರು ಎಲೈಟ್ ಸಂಸ್ಥೆ ಸ್ಥಾಪಕಾಧ್ಯಕ್ಷ ರೊ. ವಿಜಯ ಹಾರ್ವಿನ್ ನಾಯಕತ್ವದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿಯೇ ಸಾಮಾಜಿಕ ಸೇವಾ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಆರೋಗ್ಯ, ಶಿಕ್ಷಣ, ಮಾಹಿತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಿದ್ದು, ರೋಟರಿ ಜಿಲ್ಲೆಯ ಮೀಡಿಯಂ ಕ್ಲಬ್ ವಿಭಾಗದಲ್ಲಿ ಪ್ಲಾಟಿನಂ ಪುರಸ್ಕಾರಕ್ಕೆ ಪಾತ್ರವಾಗಿದೆ.

ಕೊರೋನ ಸಂಕಷ್ಟದ ಕಾಲದಲ್ಲಿಯೂ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ರೋಟರಿ ಎಲೈಟ್ ನ ಏಕ್ ಚಮಚ್ ಕಮ್ ಚಾರ್ ಕದಮ್ ಆಗೆ, ಪೋಲಿಯೋ ಜಾಗೃತಿ ವಿಡಿಯೋಗಳು ಸೇರಿದಂತೆ 87 ವಿಡಿಯೋ ಗಳಿಗೆ ರೋಟರಿ ಜಿಲ್ಲೆಯಲ್ಲಿ ಇನೋವೇಟಿವ್ ಪ್ರಾಜೆಕ್ಟ್ ಪುರಸ್ಕಾರದ ಗೌರವ ಲಭಿಸಿದೆ.

ನಾಲ್ಕು ತಿಂಗಳಿನಿಂದ ಬೆಟ್ಟಂಪಾಡಿ ಗ್ರಾಮದಲ್ಲಿ ಕ್ಯಾನ್ಸರ್ ರೋಗ ಪತ್ತೆ ಹಾಗೂ ಚಿಕಿತ್ಸೆಯ ಅಭಿಯಾನವನ್ನು 900 ಮನೆ ಸಮೀಕ್ಷೆ ಯ ಮೂಲಕ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ವಿವಿಧ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ನಡೆಸಲಾಗಿದೆ. ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಣಾ ಕಲಿಕೆ ಗೆ ಸಂಬಂಧಿಸಿ ಕೇಂದ್ರ ಸ್ಥಾಪನೆ, ವಿವಿಧೆಡೆ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಾಗಾರ, ಪುತ್ತೂರಿನ ಇತರ ಮೂರು ರೋಟರಿ ಕ್ಲಬ್ ಗಳ ಜೊತೆಗೂಡಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಶೀತಲೀಕೃತ ಯಂತ್ರಗಳ ಕೊಡುಗೆ ನೀಡಿರುವುದು, ಜಾಗೃತಿ ವಾಹನ ಸೇರಿದಂತೆ 242 ಕಾರ್ಯಕ್ರಮಗಳನ್ನು ನಡೆಸಿ ಗಮನ ಸೆಳೆದಿದೆ.

ಜು. 25ರಂದು ಪದಗ್ರಹಣ

ರೋಟರಿ ಎಲೈಟ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು. 25ರಂದು ಸುದಾನ ವಿದ್ಯಾಸಂಸ್ಥೆಯಲ್ಲಿನ ಅಡ್ವರ್ಡ್ ಹಾಲ್‌ನಲ್ಲಿ ಸಂಜೆ ಗಂಟೆ 5ಕ್ಕೆ ಜರುಗಲಿದೆ. ರೋಟರಿಯ ಜಿಲ್ಲಾ ಕಾರ್ಯದರ್ಶಿ ವಿಕ್ರಮ್ ದತ್ತ ಅವರು ಪದಪ್ರದಾನ ಅಧಿಕಾರಿಯಾಗಿ ಆಗಮಿಸಲಿದ್ದು, ಹೋಫ್ ಪೌಂಡೇಶನ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಸೈಫಾ ಸುಲ್ತಾನ್ ಸೈಯದ್ ಹಾಗು ಇತರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News