×
Ad

ಶ್ರೀಲಂಕಾ ಪ್ರಜೆಗಳ ಅಕ್ರಮ ಸಾಗಾಟ ಪ್ರಕರಣ: ಎನ್‌ಐಎಯಿಂದ ತನಿಖೆ

Update: 2021-07-24 15:48 IST

ಮಂಗಳೂರು, ಜು.24: ನಗರದಲ್ಲಿ ಕೆಲ ಸಮಯದ ಹಿಂದೆ ತಪಾಸಣೆಯ ವೇಳೆ ಶ್ರೀಲಂಕಾದ 38 ಮಂದಿ ಅಕ್ರಮ ನಿವಾಸಿಗಳನ್ನು ವಶಪಡಿಸಿಕೊಂಡಿದ್ದ ಪ್ರಕರಣವನ್ನು ರಾಷ್ಟ್ರೀಯ ಭದ್ರತಾ ಏಜೆನ್ಸಿ (ಎನ್‌ಐಎ) ತನಿಖೆ ನಡೆಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

ಅಕ್ರಮ ವಲಸೆ, ಅಕ್ರಮ ವಾಸ್ತವ್ಯ ಹಾಗೂ ಮಾನವ ಕಳ್ಳ ಸಾಗಾಟಕ್ಕೆ ಸಂಬಂಧಿಸಿ ಈ 38 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಸಕ್ತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣವಾಗಿರುವ ಕಾರಣ ಎನ್‌ಐಎಯಿಂದ ತನಿಖೆ ಆರಂಭಗೊಂಡಿದ್ದು, ನಗರಕ್ಕೆ ಆಗಮಿಸಿದ ಎನ್‌ಐಎ ಅಧಿಕಾರಿಗಳಿಗೆ ಸಹಕಾರವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವು ಪತ್ತೆಯಾಗಿದ್ದು, ಕಳವಾಗಿರುವ ಮನೆಯ ಸಂಬಂಧಿಕರೇ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರ ಧ್ವನಿಯನ್ನು ಮಿಮಿಕ್ರಿ ಮಾಡಲಾಗಿದೆ ಎಂಬ ಕುರಿತು ಸ್ಥಳೀಯ ಶಾಸಕರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರು ಮನವಿಯೊಂದನ್ನು ತಮಗೆ ಸಲ್ಲಿಸಿದ್ದು, ಪ್ರಕರಣವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ತನಿಖೆಗೆ ಒಳಪಡಿಸುತ್ತಿರುವುದಾಗಿ ಹೇಳಿದ್ದರು. ಅದರಂತೆ ಅಲ್ಲಿಂದಲೇ ತನಿಖೆ ನಡೆಯುತ್ತಿದೆ. ಇಲ್ಲಿ ಯಾರಿಂದಲೂ ತನಿಖೆ ನಡೆಸುವಂತೆ ದೂರು ನೀಡಲಾಗಿಲ್ಲ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News