ಮಂಗಳೂರು : ಪೊಲೀಸ್ ಶ್ವಾನ 'ಸುಧಾ'ಗೆ ಭಾವಪೂರ್ಣ ಅಂತಿಮ ನಮನ

Update: 2021-07-24 13:42 GMT

ಮಂಗಳೂರು, ಜು. 24: ಪೊಲೀಸ್ ಕಮಿಷನರೇಟ್ ಹಾಗೂ ದ.ಕ. ಜಿಲ್ಲೆಯಾದ್ಯಂತ ಹಲವಾರು ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರಿಗೆ ಸಹಕಾರ ನೀಡಿರುವ ಪೊಲೀಸ್ ಶ್ವಾನ 'ಸುಧಾ' ಇಂದು ಮುಂಜಾನೆ ಕೊನೆಯುಸಿರೆಳೆದಿದೆ. ನಗರದ ಪೊಲೀಸ್ ಕಮಿಷನರೇಟ್ ವತಿಯಿಂದ ಪೊಲೀಸ್ ಮೈದಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಸುಧಾಗೆ ಭಾವಪೂರ್ಣ ಅಂತಿಮ ನಮನವನ್ನು ಸಲ್ಲಿಸಲಾಯಿತು.

ಬಿಳಿ ವಸ್ತ್ರದಲ್ಲಿ ಶ್ವಾನ ಸುಧಾಳ ಮೃತದೇಹವನ್ನು ಸುತ್ತಿ, ಹೂವಿನಿಂದ ಅಲಂಕರಿಸಿ ಪೊಲೀಸ್ ವಾದ್ಯ, ತೋಪು ಹಾರಿಸುವಿಕೆ ಯೊಂದಿಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಹಾಗೂ ಇತರ ಹಿರಿಯ ಅಧಿಕಾರಿಗಳು, ಸಿಬ್ಬಂದಿಯ ಉಪಸ್ಥಿತಿಯಲ್ಲಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಬಳಿಕ ಮೃತದೇಹವನ್ನು ಪೊಲೀಸ್ ಮೈದಾನದ ಅಂಚಿನಲ್ಲಿ ಹೂಳುವ ಮೂಲಕ ಅಂತ್ಯ ಸಂಸ್ಕಾರವನ್ನು ನೆರವೇರಿಸಿ, ತುಳಸಿ ಗಿಡವನ್ನು ನೆಟ್ಟು ನೀರೆರೆಯಲಾಯಿತು.

ಡಾಬರ್‌ಮೆನ್ ಪಿಂಚರ್ ಜಾತಿಗೆ ಸೇರಿದ ಸುಧಾ 2011ರ ಮಾರ್ಚ್ 15ರಂದು ಜನಿಸಿತ್ತು. ಅಪರಾಧ ಪತ್ತೆ ಶ್ವಾನವಾಗಿ ಪೊಲೀಸ್ ಇಲಾಖೆಯನ್ನು ಇದು 2012ರ ಎಪ್ರಿಲ್ 2ರಿಂದ ಕರ್ತವ್ಯವನ್ನು ಆರಂಭಿಸಿತ್ತು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ವಾನಗಳಲ್ಲಿ ಅತ್ಯಂತ ಸೂಕ್ಷ್ಮಮತಿ ಹಾಗೂ ಚುರುಕಿನ ಶ್ವಾನವಾಗಿ ಗುರುತಿಸಿಕೊಂಡಿದ್ದ ಸುಧಾ ಕೆಲ ಸಮಯದ ಹಿಂದೆ ಕ್ಯಾನ್ಸರ್‌ಗೆ ಒಳಗಾಗಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು.

ಸುಧಾ ಹೆಸರು ಸಂದೀಪ್ ಬೈಕ್ ಗೆ 

3 ತಿಂಗಳ ಹಸಿಗೂಸಿನಿಂದ ಸುಧಾಳನ್ನು ಸಾಕಿ ಸಲಹಿ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ ಸಂದೀಪ್ ಇಂದು ಅಕ್ಷರಶ: ಭಾವುಕರಾಗಿದ್ದರು. ಕಣ್ಣೀರಿಡುತ್ತಲೇ ಸಂದೀಪ್ ಸುಧಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಸಂದೀಪ್‌ಗೆ ಸುಧಾ ಜತೆಗಿನ ನಂಟು ಅದೆಷ್ಟು ಗಾಢವಾಗಿತ್ತೆಂದರೆ ಕೆಲ ಸಮಯದ ಹಿಂದೆ ತಾವು ಖರೀದಿಸಿದ್ದ ಹೊಸ ಬೈಕ್‌ಗೂ ಅವರು ಸುಧಾಳ ಹೆಸರನ್ನಿಟ್ಟಿದ್ದಾರೆ.

‘‘ಮೂರು ತಿಂಗಳ ಮರಿಯಿಂದ ನಾನು ಆಕೆಯನ್ನು ಸಾಕಿದ್ದೇನೆ. ಅತ್ಯಂತ ಚುರುಕಿನ ಶ್ವಾನ ಆಕೆ ಮಾತ್ರವಲ್ಲದೆ, ನಾನು ಅರ್ಧ ತಾಸು ಎಲ್ಲಿಯಾದರೂ ಹೊರ ಹೋಗುವುದಾದರೂ ನಾನೆಲ್ಲಿ ಕುಳ್ಳಿರಿಸಿ ಹೋಗುತ್ತೇನೋ ಅಲ್ಲೇ ನನಗಾಗಿ ಕಾಯುತ್ತಿದ್ದಳು. ಅತ್ಯಂತ ಸೂಕ್ಷ್ಮಮತಿಯವಳಾಗಿದ್ದ ಸುಧಾ ಹಲವಾರು ಅಪರಾಧ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದ್ದು ಪ್ರಕರಣ ಬೇಧಿಸಲು ಸಹಕರಿಸಿದ್ದಾಳೆ’’ ಎಂದು ಸಂದೀಪ್ ಪ್ರತಿಕ್ರಿಯಿಸಿದರು.

‘‘ಕಳೆದ ಐದು ತಿಂಗಳಿನಿಂದೀಚೆಗೆ ಎದೆಭಾಗದಲ್ಲಿ ಟ್ಯೂಮರ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ಒದಗಿಸಲಾಗಿತ್ತು. ಆ ಬಳಿಕ ಚೆನ್ನಾಗಿಯೇ ಇದ್ದ ಸುಧಾ ಆರೋಗ್ಯ ಕಳೆದ ಒಂದು ವಾರದಿಂದ ತೀರಾ ಹದಗೆಟ್ಟಿತ್ತು. ಎರಡು ದಿನಗಳಿಂದ ಆಹಾರವನ್ನೂ ತ್ಯಜಿಸಿದ್ದು, ಇಂದು ಬೆಳಗ್ಗೆ 10.20ರ ವೇಳೆಗೆ ಕೊನೆಯುಸಿರೆಳಿದಿದೆ. ಎರಡು ಕೊಲೆ ಪ್ರಕರಣಗಳು ಸೇರಿದಂತೆ ಮಂಗಳೂರು ಮಾತ್ರವಲ್ಲದೆ ದ.ಕ. ಜಿಲ್ಲೆಯಾದ್ಯಂತ ಹಲವಾರು ಪ್ರಕರಣಗಳನ್ನು ಬೇಧಿಸುವಲ್ಲಿ ಸುಧಾ ಪೊಲೀಸರಿಗೆ ಸಹಕಾರ ನೀಡಿದೆ. ಶ್ವಾನ ದಳದ ಚುರುಕಾದ ಶ್ವಾನ ಇದಾಗಿತ್ತು. ನಗರ ಶ್ವಾನ ದಳದಲ್ಲಿ ಪ್ರಸಕ್ತ ಐದು ಶ್ವಾನಗಳಿದ್ದು, ಎರಡು ಶ್ವಾನಗಳು ತರಬೇತಿ ಪಡೆಯುತ್ತಿವೆ. ಸುಧಾ ಕೊನೆಯುಸಿರೆಳಿದಿದ್ದು, ಇನ್ನೆರಡು ಶ್ವಾನಗಳು ಸದ್ಯ ಕರ್ತವ್ಯದಲ್ಲಿವೆ. ತರಬೇತಿಯಲ್ಲಿರುವ ಶ್ವಾನಗಳು ಶೀಘ್ರವೇ ತರಬೇತಿ ಮುಗಿಸಿ ಕರ್ತವ್ಯಕ್ಕೆ ಸೇರ್ಪಡೆಯಾಗಲಿವೆ ’’

- ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News