ಚಾರ್ಮಾಡಿ ಘಾಟಿ ಕುಸಿತ ಪ್ರದೇಶದಲ್ಲಿ ತಾತ್ಕಾಲಿಕ ದುರಸ್ತಿ ಆರಂಭ

Update: 2021-07-24 11:42 GMT

ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾರ್ಮಾಡಿ ಘಾಟಿಯ 6ನೇ ತಿರುವಿನ ಬಳಿ ಉಂಟಾಗಿರುವ ಗುಡ್ಡ ಕುಸಿತ ಪ್ರದೇಶದಲ್ಲಿ ತಾತ್ಕಾಲಿಕ ದುರಸ್ತಿ ಕಾಮಗಾರಿ ಶನಿವಾರ ಆರಂಭಿಸಲಾಗಿದೆ.

ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳೆ ನೀರು ರಸ್ತೆ ಮೂಲಕ ಹರಿದು ತಡೆಗೋಡೆ ಭಾಗದಿಂದ ಇಳಿದ ಕಾರಣ ರಸ್ತೆಯ ತಳಭಾಗದ ಮಣ್ಣು ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿತ್ತು. ಇದು ಇನ್ನಷ್ಟು ಕುಸಿದರೆ ಚಾರ್ಮಾಡಿ ಮೂಲಕ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆ ಎದುರಾಗಿತ್ತು.

ಶುಕ್ರವಾರ ಘಟನಾ ಸ್ಥಳಕ್ಕೆ ತೆರಳಿದ ಬೆಳ್ತಂಗಡಿ ತಹಶೀಲ್ದಾರ್ ಜೆ. ಮಹೇಶ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಇಇ ಕೃಷ್ಣಕುಮಾರ್, ಕೇಶವಮೂರ್ತಿ, ಕೀರ್ತಿ ಅಮೀನ್  ಮೊದಲಾದ ಅಧಿಕಾರಿಗಳು ಹೆಚ್ಚಿನ ಅಪಾಯ ಉಂಟಾಗದಂತೆ ಕುಸಿತ ಪ್ರದೇಶದಲ್ಲಿ ಏಕಮುಖ ರಸ್ತೆ ಸಂಚಾರ ವ್ಯವಸ್ಥೆ,  ಬ್ಯಾರಿಕೇಡ್, ತಡೆಬೇಲಿ ಅಳವಡಿಕೆ, ಚರಂಡಿಗಳಲ್ಲಿ ತುಂಬಿದ ಮಣ್ಣು ತೆರವು ಇತ್ಯಾದಿ ಮುನ್ನೆಚ್ಚರಿಕೆ ಕೈಗೊಂಡಿದ್ದರು.

ಕುಸಿತಗೊಂಡಿರುವ ಪ್ರದೇಶದಲ್ಲಿ ಇನ್ನಷ್ಟು ಕುಸಿತ ಸಂಭವಿಸುವುದನ್ನು ತಡೆಯಲು ಶನಿವಾರದಿಂದ ಮರಳಿನ ಚೀಲಗಳ ತಡೆಗೋಡೆ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಜೆಸಿಬಿ ಮೂಲಕ ಅಗತ್ಯವಿರುವಲ್ಲಿ ಚರಂಡಿಗಳನ್ನು ನಿರ್ಮಿಸಲಾಗುತ್ತಿದೆ. ಮಳೆ ಇರುವ ಕಾರಣ ಇಲ್ಲಿ ಪೂರ್ಣಪ್ರಮಾಣದ ಕಾಮಗಾರಿ ನಡೆಸಲು ಸಾಧ್ಯವಿಲ್ಲದಿರುವುದರಿಂದ ಈಗ ತಾತ್ಕಾಲಿಕವಾಗಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾತ್ರಿ ಸಂಚಾರ ನಿಷೇಧ ಮುಂದುವರಿಕೆ

ಅತಿ ಹೆಚ್ಚು ವಾಹನ ಸಂಚಾರವಿರುವ ಚಾರ್ಮಾಡಿ ಘಾಟಿಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 7ರ ತನಕ ನಿಗದಿತ ವಾಹನಗಳ ಸಂಚಾರಕ್ಕೆ ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಮುಂದಿನ ಆದೇಶದ ತನಕ ರಾತ್ರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

"ಕುಸಿತ ಪ್ರದೇಶದಲ್ಲಿ ಪ್ರಕೃತಿ ವಿಕೋಪ, ಮಳೆಹಾನಿಯಡಿ ಕಾಮಗಾರಿ ನಿರ್ವಹಿಸಲು ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು. ಸದ್ಯಕ್ಕೆ ತಾತ್ಕಾಲಿಕ ರಕ್ಷಣಾ ಕಾಮಗಾರಿ ನಡೆದಿದೆ"

- ಕೃಷ್ಣಕುಮಾರ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News