ಉಡುಪಿಯ ನ್ಯಾಯಾಲಯಗಳಲ್ಲಿ 35000 ಕೇಸುಗಳು ಬಾಕಿ: ನ್ಯಾ.ಸೂರಜ್
ಉಡುಪಿ, ಜು.23: ಉಡುಪಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಟ್ಟು 35000 ಕೇಸುಗಳು ಇತ್ಯರ್ಥಗೊಳ್ಳಲು ಬಾಕಿ ಇವೆ. ಇವುಗಳನ್ನು ಆದಷ್ಟು ಶೀಘ್ರವೇ ಇತ್ಯರ್ಥಗೊಳಿಸಲು ಪ್ರಯತ್ನ ಮಾಡಬೇಕಾಗಿದೆ ಎಂದು ರಾಜ್ಯ ಹೈಕೋರ್ಟ್ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಉಡುಪಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಕೀಲರ ಡೈರೆಕ್ಟರಿ- 2021 ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಕಳೆದ ಬಾರಿ ಲೋಕ ಅದಾಲತ್‌ನಲ್ಲಿ ಒಟ್ಟು 2600 ಕೇಸುಗಳನ್ನು ವಿಲೇವಾರಿ ಮಾಡಲಾಗಿದೆ. ಮುಂದಿನ ತಿಂಗಳು ನಡೆಯುವ ಲೋಕಾ ಅದಾಲತ್‌ನಲ್ಲಿ 6000 ಕೇಸುಗಳನ್ನು ಇತ್ಯರ್ಥ ಪಡಿಸುವ ನಿರೀಕ್ಷೆ ಇದೆ. ಇದಕ್ಕೆ ಎಲ್ಲರ ಸಹಕಾರ ಅತೀ ಅಗತ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಈ ಹಿಂದೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಗಿದ್ದ ಇದೀಗ ಹೈಕೋರ್ಟ್ ನ್ಯಾಯಮೂರ್ತಿ ಆಗಿರುವ ಶಿವಶಂಕರ್ ಬಿ. ಅಮರಣ್ಣವರ್ ಅವರನ್ನು ಸನ್ಮಾನಿಸಲಾಯಿತು. ಒಳ್ಳೆಯ ತೀರ್ಪು ನೀಡಲು ಹಾಗೂ ಉತ್ತಮ ನ್ಯಾಯಾಧೀಶರಾಗಲು ವಕೀಲರೇ ಗುರುಗಳು. ಸತ್ಯ ಮತ್ತು ಸಾಕ್ಷ ಆಧಾರದಲ್ಲಿ ನ್ಯಾಯಾಧೀಶರು ತೀರ್ಮಾನ ತೆಗೆದು ಕೊಳ್ಳಬೇಕು ಎಂದು ಶಿವಶಂಕರ್ ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ವಹಿಸಿದ್ದರು. ವೇದಿಕೆಯಲ್ಲಿ ಡೈರೆಕ್ಟರಿಯ ಪ್ರಯೋಜಕರಾದ ಅರುಣಾ ಪಿ.ಹೆಗ್ಡೆ, ಅನಿತಾ ಶಿವಶಂಕರ್ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ದಿವಾಕರ್ ಎಂ.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೊನಾಲ್್ಡ ಪ್ರವೀಣ್ ಕುಮಾರ್ ವಂದಿಸಿದರು.