ಅಮೀರ್ ತುಂಬೆಗೆ ಸಂತಾಪ ಸಭೆ
ಮಂಗಳೂರು, ಜು.24: ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ ಹಂಚಿ, ಸೌಹಾರ್ದದ ಕೊಂಡಿಯಂತಿದ್ದ ಕೆ.ಎಸ್.ಅಮೀರ್ ಅಹ್ಮದ್ ತುಂಬೆಯ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಯುವ ನಾಯಕ ಕೆ.ಎಸ್.ಅಮೀರ್ ತುಂಬೆ ಅವರಿಗೆ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು.
ಬಡವರ, ನೊಂದವರ, ಆಶಾಕಿರಣವಾಗಿದ್ದ ಅಮೀರ್ 47ರ ಹರೆಯದಲ್ಲೇ ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ಆದರ್ಶಗಳು, ಕ್ರಿಯಾಶೀಲತೆ ಯುವ ಜನಾಂಗಕ್ಕೆ ದಾರಿದೀಪವಾಗಲಿ ಎಂದು ರೈ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ., ಮಾಜಿ ಸಚಿವ ಯು.ಟಿ.ಖಾದರ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಶಾಸಕರಾದ ಐವನ್ ಡಿಸೋಜಾ, ಮೊಯ್ದಿನ್ ಬಾವಾ, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಮಮತಾಗಟ್ಟಿ ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ವಿಶ್ವಾಸ್ ಕುಮಾರ್ ದಾಸ್, ಅಬ್ಬಾಸ್ ಅಲಿ, ಅಬ್ದುಲ್ ರವೂಫ್, ಶುಭೋದಯ ಆಳ್ವ, ಶಬ್ಬೀರ್ ಎಸ್, ಕೋಶಾಧಿಕಾರಿ ಮುಹಮ್ಮದ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.