ಟೋಕಿಯೊ ಒಲಿಂಪಿಕ್ಸ್‌ : ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಶುಭಾರಂಭ

Update: 2021-07-25 03:46 GMT
ಪಿ.ವಿ. ಸಿಂಧೂ (ಫೋಟೊ : AP)

ಟೋಕಿಯೊ : ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇ ದಿನ ಕೂಡಾ ಭಾರತೀಯ ಶೂಟರ್‌ಗಳು ನಿರಾಶಾದಾಯಕ ಪ್ರದರ್ಶನ ನೀಡಿದರು. ಮನು ಭಾಕೆರ್ ಮತ್ತು ಯಶಸ್ವಿನಿ ಸಿಂಗ್ ಇಬ್ಬರೂ 10 ಮೀಟರ್ ಏರ್‌ ಪಿಸ್ತೂಲ್ ಸ್ಪರ್ಧೆಯ ಫೈನಲ್ ತಲುಪಲು ವಿಫಲರಾದರು. ಆದರೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಇಸ್ರೇಲಿ ಆಟಗಾರ್ತಿ ಕ್ಸೇನಿಯಾ ಪೊಲಿಕರ್ಪೋವ್ ವಿರುದ್ಧ 21-7, 21-10 ನೇರ ಗೇಮ್‌ಗಳ ಗೆಲುವು ಸಾಧಿಸಿದರು.

ಜೆ ಗುಂಪಿನ ಮೊದಲ ಪಂದ್ಯದಲ್ಲಿ ನಿಧಾನವಾಗಿ ಆಟ ಆರಂಭಿಸಿದ ಸಿಂಧೂ ಬಳಿಕ ಆಟದ ಲಯ ಕಂಡುಕೊಂಡು, ಆಕ್ರಮಣಕಾರಿ ಆಟದ ಮೂಲಕ ಮೊದಲ ಗೇಮನ್ನು ಸುಲಭವಾಗಿ ಗೆದ್ದುಕೊಂಡರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧೂ ಬೆಳ್ಳಿಪದಕ ಗೆದ್ದುಕೊಂಡಿದ್ದರು.

ವಿಶ್ವದ ಏಳನೇ ಕ್ರಮಾಂಕದ 26 ವರ್ಷದ ಆಟಗಾರ್ತಿ 58ನೇ ರ್ಯಾಂಕಿಂಗ್ ಹೊಂದಿರುವ ಕ್ಸೇನಿಯಾ ವಿರುದ್ಧ ಪ್ರಾಬಲ್ಯ ಮೆರೆದರು. ಮುಂದಿನ ಪಂದ್ಯದಲ್ಲಿ ಸಿಂಧೂ, ಹಾಂಕಾಂಗ್‌ನ ಚೆಯುಂಗ್ ನಾನ್ ಯಿ ವಿರುದ್ಧ ಸೆಣೆಸುವರು.

ಭಾಕೆರ್ ದೋಷಯುಕ್ತ ಪಿಸ್ತೂಲಿನ ಕಾರಣದಿಂದಾಗಿ ಐದು ನಿಮಿಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು ಹಾಗೂ ಅಂತಿಮ ಎರಡು ಸುತ್ತುಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದರೂ ಅಂತಿಮ ಶೂಟ್‌ನಲ್ಲಿ ಕೇವಲ 8 ಅಂಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಭಾರತದ ಜೋಡಿ ಅರವಿಂದ್ ಸಿಂಗ್ ಮತ್ತು ಅರ್ಜುನ್ ಜಾಟ್ ಲೈಟ್‌ವೆಯ್ಟ್ ಪುರುಷರ ಡಬಲ್ ಸ್ಕಲ್ಸ್ ರೋಯಿಂಗ್ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News