ಅದಕ್ಷತೆ, ಭ್ರಷ್ಟರನ್ನು ಬಿಜೆಪಿ ಕಿತ್ತು ಹಾಕಲಿದೆ: ವೀರಪ್ಪ ಮೊಯ್ಲಿ

Update: 2021-07-25 09:56 GMT

ಮಂಗಳೂರು : ಆಡಳಿತ ನಡೆಸುವಲ್ಲಿ ಅದಕ್ಷತೆ, ಭ್ರಷ್ಟಾಚಾರ ಕಂಡುಬಂದಲ್ಲಿ ಬಿಜೆಪಿಯ ಸಂಪ್ರದಾಯದಂತೆ ಅಂಥವರನ್ನು ತೆಗೆದು ಹಾಕುವ ಕ್ರಮವಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ,‌ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ನಗರದ ಯೆನೆಪೊಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೇಂದ್ರದಲ್ಲೂ ಕೋವಿಡ್ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರನ್ನು ಸಚಿವ ಸ್ಥಾನದಿಂದ ತೆರವುಗೊಳಿಸಲಾಯಿತು. ಐಟಿಯಲ್ಲಿ ಸಾಕಷ್ಟು ಭ್ರಷ್ಟಾಚಾರವಾದ ಹಿನ್ನೆಲೆಯಲ್ಲಿ ಸಚಿವ ರವಿಶಂಕರ್ ಅವರನ್ನು ಕಿತ್ತು ಹಾಕಲಾಯಿತು. ಉತ್ತರಾಖಂಡದಲ್ಲೂ ಇಂತಹ ನಿದರ್ಶನಗಳಿವೆ ಎಂದರು.

ಬಿಜೆಪಿ ಪಕ್ಷದ ಮೇಲಿನ ಆಪಾದನೆಗಳನ್ನು ಜನ ಮರೆತು ಬಿಡುತ್ತಾರೆ ಎಂದು ಬಿಜೆಪಿಯವರು ತಿಳಿದ ಹಾಗಿದೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಬಿಜೆಪಿ ಅದಕ್ಷತೆಯಿಂದ ಆಡಳಿತ ನಡೆಸುತ್ತಿದೆ. ತನ್ನ ಅಂತ್ಯವನ್ನು ತಾನೇ ಕಾಣಲಿದೆ ಎಂದು ಭವಿಷ್ಯ ನುಡಿದರು.

ಆಸ್ಕರ್ ಫೆರ್ನಾಂಡಿಸ್ 1967ರಿಂದ ನಿಕಟ ಪರಿಚಯ. ಸದಾ ಸಜ್ಜನಿಕೆಯ ಸ್ವಭಾವ. ಜನಸೇವೆಯಲ್ಲಿ ಯಾವಾಗಲೂ ತೊಡಗಿಸಿಕೊಳ್ಳುತ್ತಿದ್ದರು. ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಆಸ್ಕರ್ ಬೇಗ ಗುಣಮುಖರಾಗಿ ಜನಸೇವೆಯತ್ತ ತೊಡಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News