×
Ad

ವಿಶ್ವ ಕುಸ್ತಿ ಪಂದ್ಯಾಟದ ಗೆಲುವನ್ನು ಒಲಿಂಪಿಕ್ಸ್‌ ಗೆಲುವೆಂದು ಬಿಂಬಿಸಿ ನಗೆಪಾಟಲಿಗೀಡಾದ ಬಿಜೆಪಿ ನಾಯಕರು

Update: 2021-07-25 16:27 IST

ಹೊಸದಿಲ್ಲಿ: ನಿನ್ನೆ ಟೋಕಿಯೋ ಒಲಿಂಪಿಕ್ಸ್‌ ನ ವೇಟ್‌ ಲಿಫ್ಟಿಂಗ್‌ ಸ್ಫರ್ಧೆಯಲ್ಲಿ ಮೀರಾಭಾಯಿ ಚಾನು ಬೆಳ್ಳಿ ಪದಕ ಗೆದ್ದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಗಣ್ಯರು ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಪ್ರಧಾನಿ ನರೇಂದ್ರ ಮೋದಿಗೂ ಅಭಿನಂದನೆ ಸಲ್ಲಿಸಿದ್ದರು. ಈ ನಡುವೆ ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ ಅನ್ನು ಟೋಕಿಯೋ ಒಲಿಂಪಿಕ್ಸ್‌ ಎಂದು ಬಿಂಬಿಸಿ ಬಿಜೆಪಿ ನಾಯಕರು ನಗೆಪಾಟಲಿಗೀಡಾದ ಘಟನೆ ನಡೆದಿದೆ.

ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ ನಲ್ಲಿ ಪ್ರಿಯಾ ಮಲಿಕ್‌ ಚಿನ್ನದ ಪದಕ ಗೆದ್ದುಕೊಂಡಿದ್ದು, ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಕೂಡಲೇ ಇದನ್ನು ಸರಿಯಾಗಿ ಪರಿಶೀಲಿಸದ ಬಿಜೆಪಿ ನಾಯಕರು ನಾಮುಂದು ತಾಮುಂದು ಎಂಬಂತೆ ತಮ್ಮ ಸಾಮಾಜಿಕ ತಾಣ ಖಾತೆಗಳಲ್ಲಿ ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಪ್ರಿಯಾ ಮಲಿಕ್‌ ಚಿನ್ನ ಗೆದ್ದಿದ್ದಾರೆಂದು ಪೋಸ್ಟ್‌ ಮಾಡಿದ್ದು, ವಿಷಯ ಸಂಪೂರ್ಣ ಅರಿವಾದ ಬಳಿಕ ಪೋಸ್ಟ್‌ ಡಿಲೀಟ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಸಂಸದ ತೇಜಸ್ವಿ ಸೂರ್ಯ ಹಾಗೂ ಇನ್ನಿತರ ಬಿಜೆಪಿ ಯುವ ನಾಯಕರು ತಮ್ಮ ಟ್ವಿಟರ್ ಹಾಗೂ ಸಾಮಾಜಿಕ ತಾಣ ಖಾತೆಗಳಲ್ಲಿ ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಪ್ರಶಸ್ತಿ ಗೆದ್ದ ಪ್ರಿಯಾ ಮಲಿಕ್‌ ಎಂದು ಪೋಸ್ಟ್‌ ಮಾಡಿ ಡಿಲೀಟ್‌ ಮಾಡುವುದರ ಕುರಿತು ಸಾಮಾಜಿಕ ತಾಣದಾದ್ಯಂತ ಬಳಕೆದಾರರು ವ್ಯಂಗ್ಯವಾಡಿದ್ದಾರೆ. "ನೀವು ಒಲಿಂಪಿಕ್ಸ್‌ ಕುರಿತು ತುಂಬಾ ಕೇರ್‌ ಮಾಡುತ್ತಿದ್ದೀರೆಂದು ತೋರಿಸುತ್ತಿದ್ದೀರೆಂದಾದರೆ, ಅದನ್ನು ಸರಿಯಾಗಿ ತೋರ್ಪಡಿಸಿ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News