ಪ್ರತಿಯೊಬ್ಬರ ಹೇಳಿಕೆಯನ್ನು ಗೌರವಿಸೋಣ : ಸಚಿವ ಕೋಟ

Update: 2021-07-25 11:50 GMT

ಮಂಗಳೂರು: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಅವರವರ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವಿದೆ. ಹಾಗಾಗಿ ಪ್ರತಿಯೊಬ್ಬರ ಹೇಳಿಕೆಯನ್ನು ಗೌರವಿಸಬೇಕಾಗಿದೆ. ಸದ್ಯದ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿ ಬಿಜೆಪಿಯ ಹಿರಿಯ ಮುಖಂಡರು, ಪಕ್ಷದ ಹೈಕಮಾಂಡ್, ಪಕ್ಷದ ರಾಜ್ಯ ಮತ್ತು ರಾಷ್ಟ್ರದ ಅಧ್ಯಕ್ಷರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ರವಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ತನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಪಕ್ಷದ ಕೆಲವು ಕಾರ್ಯಕರ್ತರು ಮನವಿ ಮಾಡಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ವಾಮಿಗಳು, ಸಾಧುಗಳು, ಸಂತರು, ಬೆಂಬಲಿಗರು ತಮ್ಮ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ಗೌರವಿಸಬೇಕಾಗಿದೆ. ಸಾಮಾನ್ಯ ಕಾರ್ಯಕರ್ತನಾಗಿ ನಾನು ಮತ್ತು ನನ್ನಂತಹವರು ಯೋಚನೆ ಮಾಡುವುದೆಂದರೆ ನಮ್ಮನ್ನು ಕಟ್ಟಿ ಬೆಳೆಸಿದ ಪಕ್ಷ, ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಅನುಭವದ ಬುತ್ತಿ ಕಟ್ಟಿಕೊಟ್ಟಿದ್ದಾರೆ. ನನ್ನಂತಹ ಸಾಮಾನ್ಯ ಕಾರ್ಯಕರ್ತರಿಗೆ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ. ಹಾಗಾಗಿ ಪಕ್ಷದ ಮುಖಂಡರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ. ಈಗಾಗಲೆ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷ ನನಗೆ ತಾಯಿಗೆ ಸಮಾನ. ಪಕ್ಷದ ಹೈಕಮಾಂಡ್ ಹೇಳಿದಂತೆ ಕೇಳುವೆ ಎಂದಿದ್ದಾರೆ. ಹಾಗಾಗಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಆಸ್ಕರ್ ಫೆರ್ನಾಂಡಿಸ್‌ರ ಯೋಗಕ್ಷೇಮ ವಿಚಾರಣೆ

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್‌ ಅವರ ಯೋಗಕ್ಷೇಮವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರವಿವಾರ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿರಿಯ ರಾಜಕಾರಣಿ ಆಸ್ಕರ್ ಫೆರ್ನಾಂಡೀಸ್ ಅವರು ರಾಷ್ಟ್ರೀಯ ಹೆದ್ದಾರಿ, ಎಂಆರ್‌ಪಿಎಲ್ ಬೃಹತ್ ಕಂಪೆನಿ ಸಹಿತ ಅನೇಕ ಯೋಜನೆಗಳು ಕರಾವಳಿಗೆ ಸಿಗುವಂತೆ ಮಾಡಿದ್ದಾರೆ. ಕರಾವಳಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರೊಬ್ಬ ಆದರ್ಶ ಮತ್ತು ವಿಶ್ವಾಸಾರ್ಹ ರಾಜಕಾರಣಿ. ಪ್ರಮುಖ ರಾಜಕಾರಣಿಗಳಾದ ಟಿ.ಎ. ಪೈ, ಡಾ.ವಿ.ಎಸ್. ಆಚಾರ್ಯ, ಜನಾರ್ದನ ಪೂಜಾರಿ ಯಂತಹವರ ಸಮಕಾಲೀನರು. ವ್ಯಕ್ತಿಗತವಾಗಿ ನನಗೆ ಅವರ ಬಗ್ಗೆ ಗೌರವವಿದೆ. ನನ್ನ ಬಗ್ಗೆಯೂ ಅವರಿಗೆ ಕಾಳಜಿ ಇತ್ತು. ಅವರು ಗುಣಮುಖ ರಾಗಿ ಬರಲಿ’ ಎಂದು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News