ಪ್ರಯೋಗಶೀಲತೆಯಿಂದ ಕೃಷಿ ಲಾಭದಾಯಕವಾಗಲು ಸಾಧ್ಯ: ನಳಿನ್ ಕುಮಾರ್

Update: 2021-07-25 13:40 GMT

ಉಡುಪಿ, ಜು.25: ಕೃಷಿ ಬಿಟ್ಟು ನಮ್ಮ ಸಂಸ್ಕೃತಿ ಇಲ್ಲ. ನಮ್ಮ ಹಿರಿಯರು ನಡೆಸಿಕೊಂಡು ಬಂದ ಕೃಷಿಯಲ್ಲಿ ಆನಂದ ಇರುವುದನ್ನು ತಿಳಿದುಕೊಳ್ಳದ ಪರಿಣಾಮ ಇಂದು ಕೃಷಿ ಭೂಮಿಗಳು ಹಡಿಲು ಬಿದ್ದಿವೆ. ಹೊಸ ಪ್ರಯೋಗಗಳ ಮೂಲಕ ಕೃಷಿಯನ್ನು ನಷ್ಟದ ಬದಲು ಜೀವನದ ಲಾಭದಾಯಕ ಕ್ಷೇತ್ರವನ್ನಾಗಿ ಮಾಡಬಹುದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಹಡಿಲು ಭೂಮಿ ಕೃಷಿ ಆಂದೋಲನದ ಸಮಾರೋಪ ಸಮಾರಂಭಕ್ಕೆ ರವಿವಾರ ಪರ್ಕಳದ ಸಣ್ಣಕ್ಕಿ ಬೆಟ್ಟುವಿನಲ್ಲಿ ಗದ್ದೆಗೆ ಇಳಿದು ಟ್ಯಾಕ್ಟರ್ ಚಲಾಯಿಸಿ, ನೇಜಿ ನೆಟ್ಟು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ನಮ್ಮ ಹಿರಿಯರು ಹಾಗೂ ಪರಂಪರೆ ಕೃಷಿಯನ್ನು ಎಂದಿಗೂ ಲಾಭದ ಹಾಗೂ ವ್ಯವಹಾರದ ದೃಷ್ಠಿಯಲ್ಲಿ ನೋಡಿಲ್ಲ. ಬದಲಾಗಿ ಕೃಷಿಯಲ್ಲಿ ಭಗವಂತನ ಆರಾಧನೆಯನ್ನು ಮಾಡುತ್ತಿದ್ದರು. ಈ ಭಾವನೆಯಿಂದಾಗಿ ಎಷ್ಟೇ ನಷ್ಟವಾದರೂ ಕೃಷಿ ಭೂಮಿಯನ್ನು ಮಾತ್ರ ಹಡಿಲು ಬಿಡುತ್ತಿರಲಿಲ್ಲ. ಭಾರತೀಯ ಶಿಕ್ಷಣ ಪರಂಪರೆ ಗುರುಕುಲದಲ್ಲಿ ಕೃಷಿ ಶಿಕ್ಷಣ ಆಳವಡಿಸಲಾಗಿತ್ತು. ಆದರೆ ಅದು ಲಾರ್ಡ್ ಮೆಕಾಲೆ ಶಿಕ್ಷಣ ಪದ್ಧತಿಯ ನಂತರ ಬದಲಾಯಿತು ಎಂದರು.

ನಮ್ಮ ದೇಶ ಕೃಷಿ ಹಾಗೂ ಋಷಿ ಸಂಸ್ಕೃತಿ ಆಧಾರದ ಮೇಲೆ ನಿಂತಿದೆ. ಕೋವಿಡ್ ನಂತರ ಜನರಿಗೆ ಕೃಷಿ ಮೇಲಿನ ಭಾವನೆ ಬದಲಾಗಿದೆ. ಕೃಷಿಯೇ ನಮ್ಮ ಬದುಕು ಎಂಬುದನ್ನು ಜನ ಅರಿತುಕೊಂಡು ಹೆಚ್ಚಿನ ಒಲವು ತೋರಿಸು ತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೃಷಿ ಕ್ಷೇತ್ರಕ್ಕೆ ಭರಪೂರ ಸೌಲಭ್ಯಗಳನ್ನು ಒದಗಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಮಣಿಪಾಲ ಮಾಹೆ ಪ್ರೊಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್ ವಹಿಸಿದ್ದರು. ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿದರು. ಕಾಪು ಶಾಸಕ ಲಾಲಾಜಿ ಮೆಂಡನ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಕುಂದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು.

ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುಕೊಳ, ಸದಸ್ಯರಾದ ಕಲ್ಪನಾ, ವಿಜಯ ಲಕ್ಷ್ಮೀ, ಮಂಜುನಾಥ ಮಣಿಪಾಲ, ಉದ್ಯಮಿ ಸುಧೀರ್ ಶೆಟ್ಟಿ, ಮಾಜಿ ಅಧ್ಯಕ್ಷ ದಿನಕರ್ ಶೆಟ್ಟಿ ಹೆರ್ಗೆ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ, ಪ್ರಮುಖರಾದ ದಿಲೀಪ್‌ ರಾಜ್ ಹೆಗ್ಡೆ, ಶ್ರೀನಿವಾಸ ಉಪಾಧ್ಯಾಯ, ರಮೇಶ್ ಸಾವಣ್ಕರ್, ಜಯರಾಜ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ನಗರಸಭೆ ಅಧ್ಯಕ್ಷ ಸುಮಿತ್ರಾ ಆರ್.ನಾಯಕ್ ಸ್ವಾಗತಿಸಿದರು, ಟ್ರಸ್ಟ್‌ನ ಮರುಳಿ ಕಡೇಕಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News