ಬಿಜೆಪಿ ಚುನಾವಣೆಗಾಗಿ 40 ಕೋ.ರೂ.ಗಳನ್ನು ಅಕ್ರಮವಾಗಿ ಸಂಗ್ರಹಿಸಿತ್ತು: ಕೇರಳ ಪೊಲೀಸರು

Update: 2021-07-25 14:19 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ ,ಜು.25: ಈ ವರ್ಷದ ಎಪ್ರಿಲ್ ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯು ಕರ್ನಾಟಕದಿಂದ 40 ಕೋ.ರೂ.ಗಳನ್ನು ಅಕ್ರಮವಾಗಿ ಸಂಗ್ರಹಿಸಿತ್ತು ಮತ್ತು ಹವಾಲಾ ಮೂಲಕ ಪಕ್ಷದ ಕೇರಳ ಘಟಕದ ವಿವಿಧ ಪದಾಧಿಕಾರಿಗಳಿಗೆ ಅದನ್ನು ವಿತರಿಸಿತ್ತು ಹಾಗೂ ಮತದಾನಕ್ಕೆ ಮೂರು ದಿನಗಳ ಮುನ್ನ ತ್ರಿಶೂರು ಜಿಲ್ಲೆಯಲ್ಲಿ ನಡೆದಿದ್ದ ಹೆದ್ದಾರಿ ದರೋಡೆ ಪ್ರಕರಣದಲ್ಲಿಯ 3.50 ಕೋ.ರೂ.ಈ ಕಪ್ಪುಹಣದ ಭಾಗವಾಗಿತ್ತು ಎಂದು ಶುಕ್ರವಾರ ತ್ರಿಶೂರು ನ್ಯಾಯಾಲಯದಲ್ಲಿ ಕ್ರೈಂ ಬ್ರಾಂಚ್ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಈ ಕಪ್ಪುಹಣದ 4.40 ಕೋ.ರೂ.ಗಳ ಇನ್ನೊಂದು ಭಾಗವನ್ನು ಕರ್ನಾಟಕದಿಂದ ಕೇರಳಕ್ಕೆ ಸಾಗಿಸುತ್ತಿದ್ದಾಗ ತಮಿಳುನಾಡಿನ ಸೇಲಮ್ನಲ್ಲಿ ಲೂಟಿ ಮಾಡಲಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಪ್ರಕರಣದಿಂದ ಅಂತರವನ್ನು ಕಾಯ್ದುಕೊಂಡಿದ್ದ ಬಿಜೆಪಿ,ಪೊಲೀಸರು ಪ್ರಕರಣಕ್ಕೂ ಪಕ್ಷಕ್ಕೂ ನಂಟು ಕಲ್ಪಿಸುವಂತಿಲ್ಲ ಎಂದು ಹೇಳಿತ್ತು. ಕೇರಳ ಹೆದ್ದಾರಿ ದರೋಡೆ ಪ್ರಕರಣದಲ್ಲಿ ತನಿಖೆಯನ್ನು ಕೋರಿ ಈ ಮೊದಲು ಜಾರಿ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಲೋಕತಾಂತ್ರಿಕ ಯುವ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಸಲೀಂ ಮಡವೂರ ಅವರು ಸೇಲಂ ಲೂಟಿಯ ಬಗ್ಗೆ ಶನಿವಾರ ತಮಿಳುನಾಡು ಡಿಜಿಪಿಗೆ ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ. ಲೂಟಿಯಾಗಿರುವ ಹಣದ ಬಗ್ಗೆ ತಮಿಳುನಾಡು ಪೊಲೀಸರು ಈವರೆಗೆ ಯಾವುದೇ ದೂರನ್ನು ಸ್ವೀಕರಿಸದಿರುವುದು ಲೂಟಿಯಾದ 4.40 ಕೋ.ರೂ.ಕಪ್ಪುಹಣವಾಗಿತ್ತು ಎನ್ನುವುದನ್ನು ಸೂಚಿಸುತ್ತಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ಕ್ರೈಂ ಬ್ರಾಂಚ್ ಸಲ್ಲಿಸಿರುವ ದೋಷಾರೋಪ ಪಟ್ಟಿಯಂತೆ ಸೇಲಮ್ನಲ್ಲಿ ಲೂಟಿಯಾಗಿದ್ದ ಹಣವನ್ನು ರಾಜ್ಯದಲ್ಲಿ ಮತದಾನಕ್ಕೆ ಒಂದು ತಿಂಗಳು ಮೊದಲು,ಅಂದರೆ ಮಾ.6ರಂದು ಕರ್ನಾಟಕದಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು. 3.50 ಕೋ.ರೂ.ಗಳನ್ನು ಎ.3ರಂದು ತ್ರಿಶೂರಿನಲ್ಲಿ ದರೋಡೆ ಮಾಡಲಾಗಿತ್ತು.

ಕೋಝಿಕ್ಕೋಡ್ ನ ಆರೆಸ್ಸೆಸ್ ಕಾರ್ಯಕರ್ತ ಎ.ಕೆ.ಧರ್ಮರಾಜನ್ ನ ಆಪ್ತ ಧನರಾಜನ್ ಎಂಬಾತ ಲೂಟಿಯಾದ ಹಣವನ್ನು ಕೇರಳಕ್ಕೆ ತರಬೇಕಿತ್ತು. ಹವಾಲಾ ಡೀಲರ್ ಆಗಿರುವ ಧರ್ಮರಾಜನ್ ತ್ರಿಶೂರಿನಲ್ಲಿ ದರೋಡೆಯಾಗಿದ್ದ ಹಣದ ಜೊತೆಯಲ್ಲಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಕೇರಳ ಪ್ರಕರಣದಲ್ಲಿ ಧನರಾಜನ್ನನ್ನು ಸಾಕ್ಷಿಯನ್ನಾಗಿ ಹೆಸರಿಸಲಾಗಿದೆ.

ಕರ್ನಾಟಕದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 40 ಕೋ.ರೂ.ಗಳಲ್ಲಿ 17 ಕೋ.ರೂ.ಗಳನ್ನು ಧರ್ಮರಾಜನ್,ಧನರಾಜನ್ ಮತ್ತು ಇತರರು ನೇರವಾಗಿ ಕೇರಳಕ್ಕೆ ತಂದಿದ್ದರೆ,ಉಳಿದ 23 ಕೋ.ರೂ.ಗಳನ್ನು ಕೋಝಿಕ್ಕೋಡ್ನಲ್ಲಿಯ ಹವಾಲಾ ಏಜೆಂಟರ ಮೂಲಕ ತರಿಸಿಕೊಳ್ಳಲಾಗಿತ್ತು ಎಂದು ತಿಳಿಸಿರುವ ದೋಷಾರೋಪ ಪಟ್ಟಿಯು,ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮತ್ತು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಗಣೇಶನ್ ಅವರಿಗೆ ಹಣದ ಚಲನವಲನದ ಬಗ್ಗೆ ಮಾಹಿತಿಯಿತ್ತು ಹಾಗೂ ಸುರೇಂದ್ರನ್ ಅವರು ಧರ್ಮರಾಜನ್ ಜೊತೆ ನಿಕಟ ನಂಟು ಹೊಂದಿದ್ದಾರೆ ಎಂದು ಆರೋಪಿಸಿದೆ. 

ತ್ರಿಶೂರಿನಲ್ಲಿ ದರೋಡೆ ನಡೆದಿದ್ದ ಎ.3ರಂದು ಬೆಳಗಿನ ಜಾವ ಧರ್ಮರಾಜನ್ ಸುರೇಂದ್ರನ್ ಅವರ ಪುತ್ರ ಕೆ.ಎಸ್.ಹರಿಕೃಷ್ಣನ್ ಜೊತೆ ಸಂಪರ್ಕದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. ಹರಿಕೃಷ್ಣನ್ ಕೂಡ ಸಾಕ್ಷಿಗಳ ಪಟ್ಟಿಯಲ್ಲಿದ್ದಾರೆ. ತ್ರಿಶೂರಿನಲ್ಲಿ ದರೋಡೆಯಾದ 3.50 ಕೋ.ರೂ.ಗಳ ಪೈಕಿ ಕೇವಲ 1.46 ಕೋ.ರೂ.ಗಳನ್ನು ಕರೆನ್ಸಿ ಅಥವಾ ಚಿನ್ನದ ರೂಪದಲ್ಲಿ ಈವರೆಗೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಮತ್ತು ದೊಡ್ಡ ಮೊತ್ತವನ್ನು ಬಂಧಿತ 22 ಆರೋಪಿಗಳು ಖರ್ಚು ಮಾಡಿದ್ದಾರೆ ಎಂದೂ ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News