ಮಹಾರಾಷ್ಟ್ರ ಮಳೆ ದುರಂತ: ಕನಿಷ್ಠ 113 ಜನರ ಸಾವು, 100 ಜನರು ನಾಪತ್ತೆ

Update: 2021-07-25 15:13 GMT

ಮುಂಬೈ,ಜು.25: ಕಳೆದ 24 ಗಂಟೆಗಳಲ್ಲಿ ಪುಣೆಯಲ್ಲಿ ಮತ್ತೊಂದು ಸಾವು ವರದಿಯಾಗುವುದರೊಂದಿಗೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ನೆರೆ, ಭೂಕುಸಿತ ಮತ್ತು ಇತರ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ ರವಿವಾರ 113ಕ್ಕೇರಿದ್ದು,100 ಜನರು ನಾಪತ್ತೆಯಾಗಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯ ಸರಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರವಿವಾರ ತೀವ್ರ ನೆರೆ ಪ್ರಕೋಪಕ್ಕೆ ಸಿಲುಕಿರುವ ರತ್ನಾಗಿರಿ ಜಿಲ್ಲೆಯ ಚಿಪ್ಳೂಣ್ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಪ್ರದೇಶದಲ್ಲಿ ಸಹಜತೆಯನ್ನು ಮರಳಿಸಲು ಸರಕಾರದಿಂದ ಎಲ್ಲ ನೆರವಿನ ಭರವಸೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು. ದೀರ್ಘಾವಧಿಯ ಪರಿಹಾರ ಕ್ರಮಗಳಿಗಾಗಿ ಕೇಂದ್ರದ ನೆರವಿನ ಅಗತ್ಯವಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಗುರುವಾರ ಭಾರೀ ಭೂಕುಸಿತ ಸಂಭವಿಸಿದ್ದ ರಾಯಗಡ ಜಿಲ್ಲೆಯ ತಾಳಿಯೆ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಎಂಎಸ್ಎಂಇ ಸಚಿವ ನಾರಾಯಣ ರಾಣೆ ಅವರು,ಮಳೆಹಾನಿಯ ಬಗ್ಗೆ ವರದಿಯೊಂದನ್ನು ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ತನಗೆ ಸೂಚಿಸಿದ್ದಾರೆ. ಹಾನಿಗೀಡಾಗಿರುವ ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಪುನರ್ನಿರ್ಮಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ನಿರಂತರ ಮಳೆಯಿಂದಾಗಿ ಕೊಲ್ಲಾಪುರ, ಸಾಂಗ್ಲಿ, ಸಾತಾರಾ ಮತ್ತು ಪುಣೆ ಜಿಲ್ಲೆಗಳ ಒಟ್ಟು 875 ಗ್ರಾಮಗಳು ಸಂಕಷ್ಟದಲ್ಲಿವೆ ಮತ್ತು 1,35,313 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ ಎಂದು ಸರಕಾರವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News