ಪಡೀಲ್ ಡಿಸಿ ಕಚೇರಿ ಬಳಿ ಇವಿಎಂ ಸೆಂಟರ್‌ಗೆ ಭರದ ಸಿದ್ಧತೆ

Update: 2021-07-25 16:29 GMT

ಮಂಗಳೂರು, ಜು.25: ದ.ಕ. ಜಿಲ್ಲೆಯ 1 ಲೋಕಸಭೆ ಮತ್ತು 8 ವಿಧಾನಸಭಾ ಕ್ಷೇತ್ರದ ಮತಯಂತ್ರಗಳಿಗೆ ಸಂಬಂಧಿಸಿದ ಇವಿಎಂ, ವಿವಿಪ್ಯಾಟ್ ಮತ್ತು ಕಂಟ್ರೋಲ್ ಯುನಿಟ್‌ಗಳನ್ನು ಸಂಗ್ರಹಿಸಿಡಲು ಸುಸಜ್ಜಿತ ಗೋದಾಮು (ವೇರ್‌ಹೌಸ್) ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದೆ.

ನಗರದ ಪಡೀಲ್‌ನಲ್ಲಿ ನಿರ್ಮಾಣವಾಗುತ್ತಿರುವ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಬದಿಯಲ್ಲಿ ಈ ಗೋದಾಮು ನಿರ್ಮಾಣವಾಗುತ್ತಿದೆ. ದ.ಕ ಜಿಲ್ಲಾ ನಿರ್ಮಿತಿ ಕೇಂದ್ರವು ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದೆ.

ಸದ್ಯ ನಗರದ ಹ್ಯಾಮಿಲ್ಟನ್ ಸಮೀಪದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸ್ಟ್ರಾಂಗ್ ರೂಮ್‌ನಲ್ಲಿ ಜಿಲ್ಲೆಯ 1 ಲೋಕಸಭೆ ಮತ್ತು 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರ ಇರಿಸಲಾಗಿದೆ. ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾದ ಬಳಿಕ ಎಲ್ಲವೂ ಅಲ್ಲಿಗೆ ಸ್ಥಳಾಂತರಗೊಳ್ಳಲಿರುವುದರಿಂದ ಗೋದಾಮು ಕೂಡ ಅಲ್ಲೇ ನಿರ್ಮಾಣವಾಗುತ್ತಿದೆ.

ತಳ ಅಂತಸ್ತು ಮತ್ತು ಎರಡು ಮಹಡಿ ಹೊಂದಿರುವ ಈ ಕಟ್ಟಡಕ್ಕೆ 5.19 ಕೋ.ರೂ.ಅಂದಾಜು ವೆಚ್ಚ ರೂಪಿಸಲಾಗಿದೆ. ಭವಿಷ್ಯದ 30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಎಷ್ಟೆಷ್ಟು ಮತಯಂತ್ರಗಳನ್ನು ದಾಸ್ತಾನಿರಿಸಬಹುದು ಎಂದು ಅಂದಾಜಿಸಿ ಚುನಾವಣಾ ಆಯೋಗದ ನಿಯಮಾವಳಿಯಂತೆ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವಿಎಂ ಸಹಿತ ಅದಕ್ಕೆ ಸಂಬಂಧಿಸಿದ ಉಪಕರಣಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸುವ ಅಗತ್ಯವಿರುವುದರಿಂದ ಸುಸಜ್ಜಿತ ಗೋದಾಮು ನಿರ್ಮಿಸಲಾಗುತ್ತಿದೆ. ಒಂದೇ ಪ್ರವೇಶ ದ್ವಾರ, ಕಿಟಕಿ ಬಾಗಿಲುಗಳು ಸೀಲ್ ಆಗಿರುವುದು, ಗಾಳಿ ಅಡ್ಡಾಡಲು ವೆಂಟಿಲೇಟರ್, ಸೇಫ್ಟಿ ಅಲರಾಮ್, ಸಿಸಿಟಿವಿ, ಅಗ್ನಿಶಮನ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ಸೂಚನೆಯ ಪ್ರಕಾರ ಎಲ್ಲಾ ಇವಿಎಂ ಮತ್ತು ವಿವಿಪ್ಯಾಟ್, ಕಂಟ್ರೋಲ್ ಯುನಿಟ್‌ಗಳು ಜಿಲ್ಲಾ ಕೇಂದ್ರದಲ್ಲೇ ಸಂಗ್ರಹಿಸಿಡಬೇಕು. ಮತಯಂತ್ರಗಳನ್ನು ಸಂಗ್ರಹಿಸಿಡುವ ಕೊಠಡಿ, ಎರಡು ಬೀಗ ವ್ಯವಸ್ಥೆಯನ್ನು ಹೊಂದಿರಬೇಕು. ಆ ಪೈಕಿ ಒಂದು ಬೀಗದ ಕೀಲಿಗಳು ಜಿಲ್ಲಾ ಚುನಾವಣಾಧಿಕಾರಿ (ಜಿಲ್ಲಾಧಿಕಾರಿ) ಮತ್ತು ಇನ್ನೊಂದು ಬೀಗದ ಎಲ್ಲ ಕೀಲಿಗಳು ಉಪ ಚುನಾವಣಾಧಿಕಾರಿಯ ಕಸ್ಟಡಿಯಲ್ಲಿರಬೇಕು ಎಂಬ ನಿಯಮವಿದೆ.

''ಇವಿಎಂ ಗೋದಾಮು ನಿರ್ಮಾಣ ಕಾಮಗಾರಿಯನ್ನು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಚುನಾವಣಾ ಆಯೋಗದ ನಿಯಮಾವಳಿಯಂತೆ ಎಲ್ಲಾ ಕಾಮಗಾರಿ ನಡೆಯಲಿದೆ''.
- ನಿವಿತ್ ಕೆ., ಸಹಾಯಕ ಇಂಜಿನಿಯರ್, ನಿರ್ಮಿತಿ ಕೇಂದ್ರ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News