10 ಲಕ್ಷ ದಾಟಿದ ಸೋಂಕಿತರ ಸಂಖ್ಯೆ :ಲಸಿಕೆ ಪಡೆಯದವರಿಗೆ ಅಂತರ್ದೇಶೀಯ ವಿಮಾನಯಾನ ನಿಷೇಧ

Update: 2021-07-25 17:20 GMT

ಇಸ್ಲಾಮಾಬಾದ್, ಜು.25: ಪಾಕಿಸ್ತಾನದಲ್ಲಿ ಕೋವಿಡ್19 ಸೋಂಕಿತರ ಸಂಖ್ಯೆ 10 ಲಕ್ಷದ ಗಡಿಯನ್ನು ದಾಟಿದ್ದು, ಲಸಿಕೆ ಹಾಕಿಸಿಕೊಳ್ಳದವರಿಗೆ ದೇಶದೊಳಗೆ ವಿಮಾನ ಪ್ರಯಾಣವನ್ನು ನಿಷೇಧಿಸಿದೆ. 18 ವರ್ಷಕ್ಕಿಂತಲೂ ಮೇಲ್ಪಟ್ಟ ವಯಸ್ಸಿನವರಿಗೆ ಈ ವಿಮಾನಯಾನ ನಿರ್ಬಂಧವು ಅನ್ವಯಿಸಲಿದ್ದು, ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಆ್ಯಂಡ್ ಅಪರೇಶನ್ ಸೆಂಟರ್ (ಎನ್ಸಿಓಸಿ) ತಿಳಿಸಿದೆ.

‘‘ಆಂತರಿಕ ವಿಮಾನಯಾನಗಳಿಗೆ ಈ ನಿರ್ಬಂಧವು ಅನ್ವಯವಾಗಲಿದೆ. ಪಾಕಿಸ್ತಾನ ದಿಂದ ವಿದೇಶಕ್ಕೆ ಪ್ರಯಾಣಿಸುವ ಹಾಗೂ ವಿದೇಶದಿಂದ ಪಾಕಿಸ್ತಾನಕ್ಕೆ ಆಗಮಿಸುವವರಿಗೆ ಈ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಮುಂದಿನ 72 ತಾಸುಗಳೊಳಗೆ ಹಾರಾಟ ನಡೆಸುವ ವಿಮಾನಗಳಲ್ಲಿ ಈ ನಿಬಂಧಗಳು ಅನ್ವಯವಾಗುವುದಿಲ್ಲ’ ಎಂದು ಎನ್ಸಿಓಸಿ ದಾಖಲೆ ತಿಳಿಸಿದೆ.

ಭಾಗಶಃ ಲಸಿಕೆ ಪಡೆದಿರುವವರು (ಒಂದು ಡೋಸ್), ವಿದೇಶಿ ಪ್ರಜೆಗಳು, ವಿದೇಶದಲ್ಲಿ ಲಸಿಕೆ ಹಾಕಿಸಿಕೊಂಡ ದಾಖಲೆಗಳನ್ನು ಹೊಂದಿರುವ ಪಾಕ್ ಪ್ರಜೆಗಳು ಹಾಗೂ ವೈದ್ಯಕೀಯ ಕಾರಣಗಳಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದ ರೋಗಿಗಳಿಗೂ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ ಎಂದು ಎನ್ಸಿಓಸಿ ತಿಳಿಸಿದೆ.

ಪಾಕಿಸ್ತಾನದಲ್ಲಿ ರವಿವಾರ 2819 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 10,04,694ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News