ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಪ್ರಕರಣ; ಮನಪಾ ಯೋಜನಾಧಿಕಾರಿಗೆ ಐದು ವರ್ಷ ಜೈಲು, 34 ಲಕ್ಷ ರೂ. ದಂಡ

Update: 2021-07-26 12:52 GMT

ಮಂಗಳೂರು, ಜು. 26: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾ ಅಧಿಕಾರಿ ಬಿ.ಪಿ. ಶಿವರಾಜುಗೆ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ಮತ್ತು 34 ಲಕ್ಷ ರೂ. ದಂಡ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.

 2007ರ ಜುಲೈ 25ರಂದು ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾ ಅಧಿಕಾರಿ ಬಿ.ಪಿ. ಶಿವರಾಜು ತಮ್ಮ ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಮೀರಿ ಹೆಚ್ಚಿನ ಆಸ್ತಿಗಳನ್ನು ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಇನ್‌ಸ್ಪೆಕ್ಟರ್ ಪ್ರಸನ್ನ ವಿ. ರಾಜು ಮಾಹಿತಿ ಕಲೆ ಹಾಕಿದ್ದರು. ಆಗಿನ ಲೋಕಾಯುಕ್ತ ಉಪಾಧೀಕ್ಷಕರು ಮತ್ತು ಅವರ ತಂಡ ಕೇಸು ದಾಖಲಿಸಿ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು.

ದಾಳಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ತನಿಖೆಯನ್ನು ಪೂರ್ಣಗೊಳಿಸಿ ಡಿವೈಎಸ್‌ಪಿ ಆಗಿದ್ದ ಡಾ. ಪ್ರಭುದೇವ್ ಮಾಣೆ ಆರೋಪಿ ಶಿವರಾಜು ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಾದವನ್ನು ಪುರಸ್ಕರಿಸಿತು. ಆರೋಪಿಯ ಆಪಾದನೆ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಸೇವೆಗೆ ಸೇರಿದ ವರ್ಷದಿಂದ ದಾಳಿ ನಡೆದ ದಿನಾಂಕದ ವರೆಗೆ ಆರೋಪಿ ಹೊಂದಿದ್ದ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಶಿಕ್ಷೆ ಪ್ರಕಟಿಸಿದ್ದಾರೆ.

ನ್ಯಾಯಾಧೀಶರಿಂದ 106 ಪುಟಗಳ ಸುದೀರ್ಘ ಆದೇಶ ಹೊರಬಂದಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 13 (1) (ಇ) ರ ಜೊತೆಗೆ 13(2)ರ ಅಡಿಯಲ್ಲಿ ಆರೋಪಿ ಶಿವರಾಜು ಅಪರಾಧ ಎಸಗಿದ್ದಾರೆಂದು ಸಾಬೀತಾಗಿದೆ.

ಅಭಿಯೋಜನೆಯ ಪರವಾಗಿ 27 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 160 ದಾಖಲೆಗಳನ್ನು ಹಾಜರು ಪಡಿಸಲಾಗಿತ್ತು.
ಆರೋಪಿಯು ಅಸೌಖ್ಯದ ಕಾರಣ ನೀಡಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕೆಂದು ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದನು. ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಪ್ರಬಲ ವಾದ ಮಂಡಿಸಿ ಭ್ರಷ್ಟಾಚಾರ ಪ್ರಕರಣವಾದ್ದರಿಂದ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯ ವನ್ನು ಕೋರಿದರು.

ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶ ಬಿ.ಬಿ. ಜಕಾತಿ, ಅಪರಾಧಿಗೆ ಐದು ವರ್ಷ ಸಾದಾ ಸಜೆ ಮತ್ತು 34 ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ಅನುಭವಿಸಬೇಕು ಎಂದು ವಿವರಿಸಿದ್ದಾರೆ.

ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ತಮ್ಮ ಆದೇಶದಲ್ಲಿ, ‘ಭ್ರಷ್ಟಾಚಾರ ಎಂಬುದು ಸಮಾಜದಲ್ಲಿ ಕ್ಯಾನ್ಸರ್ ಪಿಡುಗಿನಂತೆ ಆಗಿದ್ದು, ಅಪರಾಧಿಗೆ ಯಾವುದೇ ರಿಯಾಯಿತಿ ನೀಡುವುದು ಸರಿಯಲ್ಲ. ಕಳೆದ 14 ವರ್ಷಗಳಿಂದ ಅಕ್ರಮ ಆಸ್ತಿ 17 ಲಕ್ಷ ರೂ.ನ್ನು ಅಪರಾಧಿ ಬಿ.ಪಿ. ಶಿವರಾಜು ಅನುಭವಿಸಿರುವುದರಿಂದ ಅದರ ಎರಡು ಪಟ್ಟು ದಂಡ ವಿಧಿಸುವುದು ಸೂಕ್ತ ಎಂದು 34 ಲಕ್ಷ ರೂ. ದಂಡ ಪಾವತಿಸಲು ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News