ಕಟ್ಟಡ ಕಾರ್ಮಿಕರ ಆಹಾರ ಕಿಟ್ ತಾರತಮ್ಯ: ಶಾಸಕರ ವಿರುದ್ಧ ಕಟ್ಟಡ ಕಾರ್ಮಿಕರ ಪ್ರತಿಭಟನೆ

Update: 2021-07-26 13:28 GMT

ಕುಂದಾಪುರ, ಜು.26: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 20 ಲಕ್ಷ ಆಹಾರ ಕಿಟ್ಗಳನ್ನು ಖರೀದಿಸಿ ಎಲ್ಲರಿಗೂ ನೀಡದೆ ಬಹುತೇಕ ಅನರ್ಹ ಕಟ್ಟಡ ಕಾರ್ಮಿಕರಿಗೆ ಬೈಂದೂರು ಶಾಸಕರು ವಿತರಿಸುತ್ತಿರುವುದನ್ನು ಖಂಡಿಸಿ ರವಿವಾರ ಕುಂದಾಪುರದಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯ ದರ್ಶಿ ಸುರೇಶ್ ಕಲ್ಲಾಗರ, ಶಾಸಕರು ಹಂಚುತ್ತಿರುವ ಆಹಾರ ಕಿಟ್ಗಳನ್ನು ಗ್ರಾಪಂನ ವ್ಯಾಪ್ತಿಯಲ್ಲಿರುವ ಎಲ್ಲಾ ನೋಂದಾಯಿತ ಕಾರ್ಮಿಕರಿಗೂ ನೀಡದೆ ತಾರತಮ್ಯ ಮಾಡಲಾಗುತ್ತಿದೆ. ಕಾರ್ಮಿಕ ಇಲಾಖೆಯು ಗ್ರಾಪಂಗಳಿಗೆ ನೀಡುತ್ತಿರುವ ಬಹುತೇಕ ಹೆಸರುಗಳ ಪಟ್ಟಿಯಲ್ಲಿ ಆನ್‌ಲೈನ್ ಗುರುತು ಚೀಟಿ ಪಡೆದವರು. ಇವರಲ್ಲಿ ಬಹುತೇಕರು ಕಟ್ಟಡ ಕಾರ್ಮಿಕರಲ್ಲ. ಅಂತವರಿಗೆ ಕಾರ್ಮಿಕರ ಆಹಾರ ವಿತರಿಸುತ್ತಿರುವುದು ಖಂಡನೀಯ ಮತ್ತು ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಬಿಜೆಪಿ ಸರಕಾರವು ಕಲ್ಯಾಣ ಮಂಡಳಿಯನ್ನು ದಂಧೆಯ ಕೇಂದ್ರವನ್ನಾಗಿಸಿ ಕೊಂಡಿದೆ. ಇದರಲ್ಲಿ ಕಾರ್ಮಿಕ ಸಚಿವರು, ಶಾಸಕರು ಮಂಡಳಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದ ಅವರು, ಕಲ್ಯಾಣ ಮಂಡಳಿಯ ತೀರ್ಮಾನಗಳ ವಿರುದ್ದ ರಾಜ್ಯದಲ್ಲಿ 1 ಲಕ್ಷ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದ್ದು ಸೆ.1ರಂದು 10 ಸಾವಿರ ಕಟ್ಟಡ ಕಾರ್ಮಿಕರಿಂದ ಮಂಡಳಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದರು.

ಸಿಐಟಿಯು ಸಂಚಾಲಕ ಎಚ್.ನರಸಿಂಹ ಮಾತನಾಡಿ, ಶಾಸನ ಸಭೆಯಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡದವರು ಶಾಸಕ ರಾಗಿದ್ದಾರೆ. ಶಾಸಕರಿಗೆ ಕಾರ್ಮಿಕರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಪ್ರತಿಯೊಬ್ಬನ ಖಾತೆಗೆ 10 ಸಾವಿರ ರೂ. ನೇರ ಜಮೆ ಮಾಡಲು ಶಾಸಕರು ಒತ್ತಾಯಿಸಬೇಕಾಗಿತ್ತು. ಅದರ ಬದಲಾಗಿ ಅವರು ಕಡಿಮೆ ಬೆಲೆಯ ಆಹಾರ ಕಿಟ್ ಕೆಲವರಿಗೆ ಮಾತ್ರ ಕೊಡುವ ಔಚಿತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಾಸ ಭಂಡಾರಿ, ಉಪಾಧ್ಯಕ್ಷ ಸಂತೋಷ ಹೆಮ್ಮಾಡಿ, ಜಗದೀಶ ಆಚಾರ್ ಹೆಮ್ಮಾಡಿ, ಸುರೇಶ್ ಪೂಜಾರಿ, ಶ್ರೀನಿವಾಸ ಪೂಜಾರಿ, ಅರುಣ್ ಕುಮಾರ್, ಅನಂತ ಕುಲಾಲ್, ನೀಲಾ, ರೇಣುಕ, ಅಲೆಕ್ಸ್, ಸಿಐಟಿಯು ಜಿಲ್ಲಾ ಮುಖಂಡ ಮಹಾಬಲ ವಡೇರ ಹೋಬಳಿ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News