ಕೋಟೇಶ್ವರ; ದುರ್ಬಲಗೊಂಡ ಕಿರು ಸೇತುವೆ: ಆತಂಕದಲ್ಲಿ ಗ್ರಾಮಸ್ಥರು

Update: 2021-07-26 13:38 GMT

ಕುಂದಾಪುರ, ಜು.26: ಕೋಟೇಶ್ವರ ಗ್ರಾಪಂ ವ್ಯಾಪ್ತಿಯ ಅರಲ್ಗುಡ್ಡೆ ವಾರ್ಡ್ ಸಂಖ್ಯೆ 4 ಮತ್ತು 5ರ ಮಧ್ಯೆ 35ವರ್ಷಗಳ ನಿರ್ಮಿಸಲಾದ ಕಿರು ಸೇತುವೆ ಇದೀಗ ಅಪಾಯದ ಅಂಚಿನಲ್ಲಿದೆ. ದುರ್ಬಲಗೊಂಡಿರುವ ಈ ಸೇತುವೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸದ್ಯ ಈ ಕಿರು ಸೇತುವೆಯಲ್ಲಿ ಜನ ಸಂಚರಿಸಲು ಭೀತಿ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ವಾಹನ ಸಂಚಾರಕ್ಕೆ ತೀರಾ ತೊಂದರೆ ಉಂಟಾಗಿದೆ. ದುರ್ಬಲಗೊಂಡಿರುವ ಈ ಸೇತುವೆ ಯಾವ ಸಂದರ್ಭದಲ್ಲೂ ಬೀಳು ಸ್ಥಿತಿಯಲ್ಲಿ ಇದೆ. ಈ ಸೇತುವೆ ಇಲ್ಲದಿದ್ದರೆ ಈ ಗ್ರಾಮಗಳಿಗೆ ದಾರಿ ಸಂಪರ್ಕವೇ ಇಲ್ಲದಂತಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ವಿನಾಯಕ ಕೋಡಿ ಹಾಗೂ ಕೋಟೇಶ್ವರಕ್ಕೆ ಸಂಪರ್ಕ ಕಲ್ಪಿಸುವ 4ನೇ ವಾರ್ಡಿ ನಲ್ಲಿ 12 ಕುಟುಂಬಗಳು ನೆಲೆಸಿವೆ. 5ನೇ ವಾರ್ಡಿನವರು ಸುಮಾರು 30 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಇದರ ಸುತ್ತಮುತ್ತಲು ಸುಮಾರು 35 ಮನೆಗಳಿವೆ. ಇವರೆಲ್ಲರೂ ಈ ಕಿರು ಸೇತುವೆಯನ್ನೇ ಅವಲಂಬಿಸಿಕೊಂಡಿದ್ದಾರೆ ಅಲ್ಲದೆ ಈ ಕಿರು ಸೇತುವೆಗೆ ಸಂಪರ್ಕ ಇರುವ 200ಮೀಟರ್ ಉದ್ದದ ರಸ್ತೆಯು ಸಂಪೂರ್ಣ ಹಾಳಾಗಿದ್ದು ಇದರಲ್ಲಿ ನಡೆಯಲು ಅಸಾಧ್ಯವಾಗಿದೆ. ಅದೇ ರೀತಿ ಈ ವಾರ್ಡಿನಲ್ಲಿ ದಾರಿದೀಪ ವ್ಯವಸ್ಥೆ ಕೂಡ ಇಲ್ಲ ಎಂದು ಸ್ಥಳೀುರಾದ ಕರಿಯಣ್ಣ ಪೂಜಾರಿ ದೂರಿದರು.

ಈ ರಸ್ತೆ ಮತ್ತು ಕಿರು ಸೇತುವೆ ವಿಚಾರವಾಗಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸ್ಥಳೀಯ ಗ್ರಾಪಂನವರ ಗಮನಕ್ಕೆ ತಂದಿದ್ದರೂ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಆದುದರಿಂದ ಸಂಬಂಧಪಟ್ಟರು ಕೂಡಲೇ ಎಚ್ಚೆತ್ತುಕೊಂಡು ಮುಂದೆ ಸಂಭವಿಸ ಬಹುದಾದ ಅಪಾಯವನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News