ಧಾರ್ಮಿಕ ಸ್ಥಳಗಳಲ್ಲಿ ಸೇವೆಗಳಿಗೆ ಅನುಮತಿ: ಜಿಲ್ಲಾಧಿಕಾರಿ ಜಿ. ಜಗದೀಶ್

Update: 2021-07-26 14:40 GMT

ಉಡುಪಿ, ಜು.26: ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಹಾಗೂ ಸೋಂಕಿನ ಸರಪಳಿಯನ್ನು ಮುರಿಯಲು ಸರಕಾರದ ನಿರ್ದೇಶನದಂತೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪರಿಣಾಮಕಾರಿ ಅನುಷ್ಟಾನದಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇದೀಗ ರಾಜ್ಯ ಸರಕಾರದ ಆದೇಶದಂತೆ ಈ ಕೆಳಕಂಡ ಅಂಶಗಳನ್ನು ಸೇರ್ಪಡೆ ಮಾಡುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅತಿ ಅವಶ್ಯ ವೆಂದು ಕಂಡು ಬಂದಿರುವ ನಿಟ್ಟಿನಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೋವಿಡ್ ಮಾರ್ಗಸೂಚಿ ಗಳಲ್ಲಿ ಕೆಲವು ಬದಲಾವಣೆ ಮಾಡಿಸಿ,ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಧಾರ್ಮಿಕ ಸ್ಥಳಗಳ ಕಾರ್ಯಚಟುವಟಿಕೆಗೆ ಸಂಬಂಧಿಸಿದಂತೆ ಪೂಜಾ ಸ್ಥಳಗಳಾದ ದೇವಾಲಯಗಳು, ಮಸೀದಿಗಳು, ಚರ್ಚುಗಳು, ಗುರುದ್ವಾರಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವುದರೊಂದಿಗೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಹೊರಡಿಸಲಾದ ಎಸ್‌ಓಪಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಜು.25ರಿಂದ ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಈ ಪೈಕಿ ಜಾತ್ರೆಗಳು, ದೇವಾಲಯ ಉತ್ಸವಗಳು, ಮೆರವಣಿಗೆಗಳು ಮತ್ತು ಸಭೆಗಳನ್ನು ನಡೆಸಲು ಅನುಮತಿ ಇರುವುದಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಅಮ್ಯೂಸ್‌ ಮೆಂಟ್ ಪಾರ್ಕ್ ಮತ್ತು ಅಂತಹ ಇತರ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಈ ಪೈಕಿ ಜಲಕ್ರೀಡೆ, ಜಲ ಸಂಬಂಧಿತ ಸಾಹಸ ಚಟುವಟಿಕೆಗಳಿಗೆ ಅನುಮತಿ ಇರುವುದಿಲ್ಲ.

ಈ ಆದೇಶಗಳನ್ನು ಪಾಲಿಸದೇ ಇರುವವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆ್ಯಕ್ಟ್ 2005, ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆ್ಯಕ್ಟ್ 2020 ಮತ್ತು ಐ.ಪಿ.ಸಿ ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News