ಜನಪ್ರತಿನಿಧಿಗಳ ಸಹಕಾರದಿಂದ ಜಲಜೀವನ್ ಮಿಷನ್ ಯೋಜನೆ ಯಶಸ್ವಿ ಅನುಷ್ಠಾನ: ಸಿಇಓ ಡಾ.ನವೀನ್ ಭಟ್

Update: 2021-07-27 17:06 GMT

ಬ್ರಹ್ಮಾವರ, ಜು.27: ಗ್ರಾಪಂ ಮಟ್ಟದಲ್ಲಿ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಿ ಸಹಕಾರ ನೀಡಿದಲ್ಲಿ ಜಲಜೀವನ್ ಮಿಷನ್ ಯೋಜನೆಯ ಯಶಸ್ವಿ ಅನುಷ್ಠಾನ ಸಾಧ್ಯ ಎಂದು ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವ ಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದ್ದಾರೆ.

ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮ ಪಂಚಾಯತ್‌ಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಜಲಜೀವನ್ ಮಿಷನ್‌ನಡಿ 15ನೆ ಹಣಕಾಸು ಅನುದಾನದ ಪಾಲನ್ನು ಮೀಸಲಿರಿಸುವುದರ ಜೊತೆಗೆ ನಾಗರಿಕರು ತಮ್ಮ ಪಾಲಿನ ವಂತಿಗೆಯನ್ನು ನೀಡುವುದು ಅತ್ಯಗತ್ಯವಾಗಿದೆ. ನಾಗರಿಕರಿಗೆ ಈ ಕುರಿತು ಮನವರಿಕೆ ಮಾಡುವುದು ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಜಲಜೀವನ್ ಮಿಷನ್ ಅತ್ಯುತ್ತಮ ಯೋಜನೆಯಾಗಿದ್ದು ಪ್ರತಿಯೊಬ್ಬ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಸದಾವಕಾಶವು ಎಲ್ಲಾ ನಾಗರಿಕರಿಗೆ ತಲುಪುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಕಾಡೂರು ಗ್ರಾಪಂ ಅಧ್ಯಕ್ಷ ಪಾಂಡುರಂಗ ಶೆಟ್ಟಿ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ಮನೆಗಳಿಗೂ ಜನಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಮೂಲಕ ಯೋಜನೆಯ ಯಶಸ್ಸಿಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಡೂರು ಪಂಚಾಯತ್ ಉಪಾಧ್ಯಕ್ಷೆ ಅಮಿತಾ ರಾಜೇಶ್, ಸದಸ್ಯರಾದ ಗಿರೀಶ್ ರಾವ್, ರಘುರಾಮ ಶೆಟ್ಟಿ, ಜಲಂಧರ್, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂ ಪುರ, ಪಂಚಾಯತ್ ಸಿಬ್ಬಂದಿ, ಎಸ್‌ಎಲ್ಆರ್‌ಎಂ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News