ಮಹಿಳೆಯರು, ಮಕ್ಕಳ ಹಿತ ಕಾಪಾಡಲು ಕ್ರಮ ವಹಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2021-07-27 17:29 GMT

ಮಂಗಳೂರು, ಜು.27: ಮಹಿಳೆಯರು ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಸರಕಾರ ಜಾರಿಗೊಳಿಸಿರುವ ಹಲವಾರು ಯೋಜನೆಗಳಿದ್ದು, ಅವುಗಳ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಜಿಲ್ಲಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು ಉಲ್ಲಂಘನೆಯಾದ ಮಾಹಿತಿ ಲಭ್ಯವಾದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಕೂಡಲೇ ಕಾರ್ಯಪ್ರವೃತರಾಗಬೇಕು. ಮಹಿಳೆಯರು ಮತ್ತು ಮಕ್ಕಳ ಕುರಿತ ಅಗತ್ಯ ಮಾಹಿತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಲ್ಲಿ ಇರಬೇಕು. ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿರುವ ಮಕ್ಕಳ ರಕ್ಷಣಾ ಸಮಿತಿಯು ಮಕ್ಕಳ ಪಟ್ಟಿಯನ್ನು ಪ್ರತಿ ತಿಂಗಳೂ ಸಿದ್ಧಪಡಿಸಿ ಯಾವುದೇ ಮಗು ಕಾಣೆಯಾದಲ್ಲಿ ಕೂಡಲೇ ಅದನ್ನು ಪತ್ತೆ ಮಾಡಲು ಅಗತ್ಯ ಕ್ರಮ ವಹಿಸುವಂತೆ ಎಚ್ಚರಿಸಿದರು.

ಈಗಾಗಲೇ ಕಲ್ಯಾಣ ಮಂಟಪಗಳು, ವಿವಾಹ ಸಂಬಂಧಿತ ಚಟುವಟಿಕೆಗಳನ್ನು ನಡೆಸುವವರಿಗೆ ಬಾಲ್ಯವಿವಾಹ ಕುರಿತಾದ ಸರಕಾರಿ ಆದೇಶ ಪ್ರತಿಯನ್ನು ನೀಡಿ ಬಾಲ್ಯವಿವಾಹ ನಡೆಸದಂತೆ ಮಾಹಿತಿ ನೀಡಲಾಗಿದೆ. ಬಾಲ್ಯವಿವಾಹ ನಡೆಯುವ ಬಗ್ಗೆ ತಿಳಿದು ಬಂದಲ್ಲಿ ಕೂಡಲೇ ಮಾಹಿತಿಯನ್ನು ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಸಲ್ಲಿಸಲು ಮೇಲ್ವಿಚಾರಕಿಯರಿಗೆ ಮಾಹಿತಿ ನೀಡುವಂತೆ ಶಿಶು ಅಭಿವೃದ್ಧಿ ವ್ಯಾಪ್ತಿಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಬೇಕು ಎಂದರು.

ಬಾಲ್ಯ ವಿವಾಹ ತಡೆಗಟ್ಟಿ ಪೋಷಕರ ವಶದಲ್ಲಿರುವ ಬಾಲಕ/ಬಾಲಕಿಯರ ಮನೆಗೆ ಭೇಟಿ ನೀಡಿ ಬಾಲ್ಯವಿವಾಹ ನಡೆಯದಂತೆ ಹಾಗೂ ಬಾಲ್ಯವಿವಾಹ ದುಷ್ಪರಿಣಾಮಗಳ ಬಗ್ಗೆ ಸಂಬಂಧಿಸಿದವರು ತಿಳಿಸಿಕೊಡಬೇಕು. ಈ ಬಗ್ಗೆ ಅಂಗನವಾಡಿನ ಕಾರ್ಯಕರ್ತೆಯರು, ಮೇಲ್ವಿಚಾರಕಿಯರ ಮೂಲಕ ಮಾಹಿತಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಬಾಲ್ಯವಿವಾಹ ನಿಷೇಧ ಬಗ್ಗೆ ಗ್ರಾಮ ಮಟ್ಟದ ಸಮಿತಿಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಸಭೆಗಳಲ್ಲಿ ಹಾಗೂ ಇಲಾಖಾ ವತಿಯಿಂದ ನಡೆಸಲಾಗುವ ವಿವಿಧ ಕಾರ್ಯಕ್ರಮಗಳಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ, ಸ್ತ್ರೀ ಶಕ್ತಿ ಗುಂಪಿನ ಸಭೆ, ಶಿಕ್ಷಕ ರಕ್ಷಕ ಸಭೆಗಳಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಬಾಲ್ಯವಿವಾಹ ನಡೆಸಿದರೆ ವಿಧಿಸಬೇಕಾದ ದಂಡ, ಶಿಕ್ಷೆಯ ಬಗ್ಗೆ ವ್ಯಾಪಕವಾಗಿ ಪ್ರಚಾರ ಹಾಗೂ ಜಾಗೃತಿ ಮೂಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಎಂಬ ಸಾಮಾಜಿಕ ಜಾಗೃತಿ ಮೂಡಿಸುವ ಕುರಿತ ಸಿಡಿಯನ್ನು ಬಿಡುಗಡೆ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News