ಮಂಗಳೂರಿನಲ್ಲಿ ‘ಪ್ರವಾಸಿ ಬಸ್’ವ್ಯವಸ್ಥೆ ಪುನರಾರಂಭಕ್ಕೆ ಪ್ರವಾಸಿಗರ ಆಗ್ರಹ

Update: 2021-07-28 13:29 GMT

ಮಂಗಳೂರು, ಜು.28: ನಗರದ ವಿವಿಧ ಪ್ರವಾಸಿ ತಾಣಗಳ ವೀಕ್ಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ಪ್ರವಾಸಿ ಬಸ್’ ಸೇವೆಯನ್ನು ಮತ್ತೆ ಆರಂಭಿಸಬೇಕು ಎಂಬ ಆಗ್ರಹ ಪ್ರವಾಸಿಗರಿಂದ ವ್ಯಕ್ತವಾಗಿದೆ.

2016ರ ಎ.17ರಂದು ಅಂದಿನ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಪಿಲಿಕುಳದಲ್ಲಿ ಪ್ರವಾಸಿ ಬಸ್‌ಗೆ ಚಾಲನೆ ನೀಡಿದ್ದರು. ಆರಂಭದ ಕೆಲವು ದಿನಗಳ ಕಾಲ ಬಸ್‌ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಆದರೆ ವರ್ಷದೊಳಗೆ ಬಸ್‌ನ ಬಿಡಿಭಾಗಗಳು ಹದಗೆಟ್ಟಿದ್ದು, ದುರಸ್ತಿ ಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಆ ಬಳಿಕ ಅವು ವಾಪಸ್ ಬಂದಿರಲಿಲ್ಲ. ಅಲ್ಲಿಗೆ ಪ್ರವಾಸಿ ಬಸ್ ಓಡಾಟವು ಸ್ಥಗಿತಗೊಂಡಿತ್ತು.

ಕೊರೋನ ಮೊದಲ ಮತ್ತು ದ್ವಿತೀಯ ಅಲೆಯ ಹೊಡೆತಕ್ಕೆ ಸಿಲುಕಿದ್ದ ಮಂಗಳೂರು ಇದೀಗ ಚೇತರಿಸುತ್ತಿವೆ. ಧಾರ್ಮಿಕ ಕೇಂದ್ರಗಳೂ ತೆರೆಯಲ್ಪಟ್ಟಿವೆ. ಹಾಗಾಗಿ ಪ್ರವಾಸಿಗರು ಕೂಡ ಮಂಗಳೂರು ಸಹಿತ ಕರಾವಳಿ ಭಾಗಕ್ಕೆ ಆಗಮಿಸತೊಡಗಿದ್ದಾರೆ. ಹಾಗೇ ಕಳೆದ 5 ವರ್ಷದಿಂದ ಸ್ಥಗಿತಗೊಂಡಿದ್ದ ‘ಪ್ರವಾಸಿ ಬಸ್’ಗಳ ವ್ಯವಸ್ಥೆಯನ್ನು ಪುನಃ ಆರಂಭಿಸಬೇಕು ಎಂದು ಆಗ್ರಹಿಸತೊಡಗಿದ್ದಾರೆ.

ಈ ಮಧ್ಯೆ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಿದ್ದು, ಅದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಮಂಗಳೂರು ಸ್ಮಾಟ್ ಸಿಟಿಯಾಗುವ ವೇಳೆ ಸೇವೆಯ ಮೂಲಕ ಪ್ರವಾಸಿ ಬಸ್‌ಗಳು ಕೂಡ ಸ್ಮಾರ್ಟ್ ಆಗಲಿ ಎಂದು ಪ್ರವಾಸಿಗರು ಅಭಿಪ್ರಾಯಪಟ್ಟಿದ್ದಾರೆ.

ಐದು ವರ್ಷದ ಹಿಂದೆ ಇದ್ದ ಬಸ್ ಬೆಳಗ್ಗಿನಿಂದ ಸಂಜೆಯವರೆಗೆ ನಗರ ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳಿಗೆ ತೆರಳುತಿತ್ತು. ಅಂದರೆ ನಗರದ ಲಾಲ್‌ಭಾಗ್‌ನಿಂದ ಪ್ರವಾಸಿಗರನ್ನು ಪಿಕಪ್ ಮಾಡುತ್ತಿದ್ದ ಬಸ್ ಕುದ್ರೋಳಿ ದೇವಸ್ಥಾನ, ಕದ್ರಿ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಪಿಲಿಕುಳ ನಿಸರ್ಗಧಾಮ, ತಣ್ಣೀರುಬಾವಿ ಟ್ರೀಪಾರ್ಕ್, ಕಡಲ ತೀರವನ್ನು ಸುತ್ತಿ ಬಳಿಕ ಲಾಲ್‌ಭಾಗ್‌ಗೆ ಮರಳುತಿತ್ತು. ಬೆಳಗ್ಗೆ ಹೊರಟರೆ ಸಂಜೆ ವಾಪಸ್ ಆಗುತ್ತಿತ್ತು. ಆರ್ಥಿಕವಾಗಿ ಹೆಚ್ಚು ಹೊರೆಯಾಗದ ಕಾರಣ ಪ್ರವಾಸಿಗರಲ್ಲದೆ ಸ್ಥಳೀಯರೂ ಕೂಡ ಈ ಬಸ್‌ನ ಸೌಲಭ್ಯ ಪಡೆಯುತ್ತಿದ್ದರು.
ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಂಡ ಬಳಿಕ ಪ್ರವಾಸೋದ್ಯಮ ಕ್ಷೇತ್ರವು ಚಿಗುರೊಡೆಯುತ್ತಿದೆ. ಇಂತಹ ಸಂದರ್ಭದಲ್ಲೇ ಬಸ್ ಸಂಚಾರ ಆರಂಭಿಸಿದರೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬ ಅಭಿಪ್ರಾಯವು ಅಧಿಕಾರಿಗಳ ವಲಯದಿಂದಲೂ ಕೇಳಿ ಬರುತ್ತಿದೆ.

''ಸ್ವಂತ ವಾಹನ ಇಲ್ಲದವರಿಗೆ ಅಧಿಕ ಬಾಡಿಗೆ ನೀಡಿ ಟ್ಯಾಕ್ಸಿ ಮಾಡಿಕೊಂಡು ಪ್ರವಾಸಿ ಸ್ಥಳಗಳಿಗೆ ತೆರಳಲು ಕಷ್ಟವಾಗಲಿದೆ. ಬೆಂಗಳೂರು, ಮೈಸೂರಿನಲ್ಲಿ ಅಂತಹ ಪ್ರವಾಸಿಗರಿಗೆ ಪ್ರತ್ಯೇಕ ಬಸ್‌ಗಳ ಸೇವೆ ಲಭ್ಯವಿದೆ. ಮಂಗಳೂರಿನಲ್ಲೂ ಮತ್ತೆ ಪ್ರವಾಸಿ ಬಸ್ ಸೇವೆ ಆರಂಭಿಸುವ ಬಗ್ಗೆ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಜೊತೆ ಮಾತುಕತೆ ನಡೆಸಲಾಗಿದೆ''.
- ಡಾ.ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News