ತಾರೆಮಾರ್‌ನಲ್ಲಿ ಗುಡ್ಡ ಕುಸಿತ : ಅಪಾಯದಲ್ಲಿ ಮನೆ

Update: 2021-07-28 13:32 GMT

ಗುರುಪುರ, ಜು.28: ಮುತ್ತೂರು ಗ್ರಾಪಂ ವ್ಯಾಪ್ತಿಯ ಗಂಜಿಮಠ-ಕುಕ್ಕಟ್ಟೆ ರಸ್ತೆ ಪಕ್ಕದ ತಾರೆಮಾರ್ ಸೈಟ್‌ನಲ್ಲಿ ಸೋಮವಾರ ರಾತ್ರಿಯಿಂದ ಗುಡ್ಡದ ಮಣ್ಣು ಕುಸಿಯಲಾರಂಭಿಸಿದ್ದು, ಇದರಿಂದ ಇಸುಬು ಎಂಬವರ ಮನೆ ಅಪಾಯಕ್ಕೆ ಸಿಲುಕಿದೆ.

ಈ ಪರಿಸರದಲ್ಲಿ ಕಳೆದ ವರ್ಷವೂ ಗುಡ್ಡ ಕುಸಿದ ಪರಿಣಾಮ ಚೆನ್ನಮ್ಮ ಎಂಬವರ ಮನೆ ಅಪಾಯಕ್ಕೆ ಸಿಲುಕಿತ್ತು. ಆಯಕಟ್ಟಿನ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಿದ ಬಳಿಕ ಆ ಮನೆ ಸುರಕ್ಷಿತವಾಗಿದೆ.

ತಾರೆಮಾರ್ ಸೈಟ್‌ನಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಗುಡ್ಡದ ನೀರೆಲ್ಲ ರಸ್ತೆಗೆ ಹರಿಯುತ್ತದೆ. ಮಳೆಗಾಲದಲ್ಲಿ ಗುಡ್ಡದಲ್ಲಿ ಪದೇಪದೇ ಮಣ್ಣು ಕುಸಿತ ಉಂಟಾಗಿ ಗುಡ್ಡಕ್ಕೆ ಹೊಂದಿಕೊಂಡಿರುವ ಮನೆಗಳಿಗೆ ಅಪಾಯ ಎದುರಾಗಿದೆ. ಚರಂಡಿ ಅಥವಾ ಪೈಪ್ ಮೂಲಕ ಸರಾಗವಾಗಿ ಗುಡ್ಡದ ನೀರು ಹರಿಯಲು ವ್ಯವಸ್ಥೆ ಮಾಡಿದರೆ ಈ ಸಮಸ್ಯೆಗೆ ಮುಕ್ತಿ ಸಿಗಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಮುತ್ತೂರು ಗ್ರಾಪಂ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಪಿಡಿಒ ವಸಂತಿ, ಸದಸ್ಯರಾದ ಥಾಮಸ್ ರೊಝಾರಿಯೊ, ತಾರನಾಥ ಕುಲಾಲ್, ರುಕ್ಮಿಣಿ, ವನಿತಾ, ಗ್ರಾಮಕರಣಿಕ ದೇವರಾಜ, ತಾಪಂ ಮಾಜಿ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಕುಪ್ಪೆಪದವು ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News