×
Ad

ಉಡುಪಿ: ಕೋವಿಡ್‌ಗೆ ಇಬ್ಬರು ಬಲಿ; 109 ಮಂದಿಗೆ ಕೊರೋನ ಸೋಂಕು

Update: 2021-07-28 19:59 IST

ಉಡುಪಿ, ಜು. 28: ಬುಧವಾರ ಜಿಲ್ಲೆಯಲ್ಲಿ ಒಟ್ಟು 109 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು, ದಿನದಲ್ಲಿ ಇಬ್ಬರು ಪುರುಷರು ಮೃತ ಪಟ್ಟಿದ್ದಾರೆ. 86 ಮಂದಿ ಸೋಂಕಿನಿಂದ ಗುಣಮುಖರಾದರೆ, 893 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಬುಧವಾರ ಕಾರ್ಕಳ ತಾಲೂಕಿನ 34ರ ಹರೆಯದ ಯುವಕ ಹಾಗೂ ಉಡುಪಿಯ 76ರ ಹರೆಯದ ವೃದ್ಧ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಬ್ಬರೂ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬಂದಿದ್ದರಿಂದ ಚಿಕಿತ್ಸೆಗೆ ದಾಖಲಾದ 24 ಗಂಟೆಯೊಳಗೆ ಕೊನೆಯುಸಿರು ಎಳೆದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 413ಕ್ಕೇರಿದೆ.

ತೀವ್ರತರದ ಕೋವಿಡ್ ಹಾಗೂ ಉಸಿರಾಟ ತೊಂದರೆಗಾಗಿ ಕಾರ್ಕಳದ ಯುವಕ ಜು.26ರಂದು ಖಾಸಗಿ ಆಸ್ಪತ್ರೆಗೆ ದಾಖಲಾದರೆ, ಲೀವರ್ ಸಮಸ್ಯೆಯೂ ಇದ್ದ ಇವರು ಮರುದಿನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಉಡುಪಿಯ 76ರ ವೃದ್ಧರೂ ಕೋವಿಡ್ ಗುಣಲಕ್ಷಣ ಹಾಗೂ ಉಸಿರಾಟ ತೊಂದರೆಯೊಂದಿಗೆ ಮಧುಮೇಹವನ್ನೂ ಹೊಂದಿದ್ದು, ಜು.27ರಂದು ಆಸ್ಪತ್ರೆಗೆ ಕರೆತಂದ ದಿನವೇ ಮೃತಪಟ್ಟರು.

ಇಂದು ಕೊರೋನ ಪಾಸಿಟಿವ್ ದೃಢಪಟ್ಟ 109 ಮಂದಿಯಲ್ಲಿ 61 ಮಂದಿ ಪುರುಷರಾಗಿದ್ದರೆ, ಉಳಿದ 48 ಮಂದಿ ಮಹಿಳೆಯರು. ಇವರಲ್ಲಿ 45 ಮಂದಿ ಉಡುಪಿ ತಾಲೂಕು, 20 ಮಂದಿ ಕುಂದಾಪುರ ಹಾಗೂ 44 ಮಂದಿ ಕಾರ್ಕಳ ತಾಲೂಕಿನವರು. 109 ಮಂದಿಯಲ್ಲಿ 11 ಮಂದಿಗೆ ಕೋವಿಡ್ ಆಸ್ಪತ್ರೆ ಹಾಗೂ 88 ಮಂದಿಗೆ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ 86 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 67,992ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 4816 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 69,298ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,72,007 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಇಂದು ಜಿಲ್ಲೆಯಲ್ಲಿ ಯಾರೂ ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗೆ ದಾಖಲಾಗಿಲ್ಲ. ಮಣಿಪಾಲ ಕೆಎಂಸಿಯಲ್ಲಿ 7 ಹಾಗೂ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಇಬ್ಬರು ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ. ಈವರೆಗೆ ಒಟ್ಟು ಐವರು ಸೋಂಕಿಗೆ ಬಲಿಯಾಗಿದ್ದಾರೆ. 32 ಮಂದಿ ಚಿಕಿತ್ಸೆಯಿಂದ ಚೇತರಿಸಿ ಕೊಂಡಿದ್ದಾರೆ.

5,164 ಮಂದಿಗೆ ಕೋವಿಡ್ ಲಸಿಕೆ

ಉಡುಪಿ ಜಿಲ್ಲೆಯಲ್ಲಿ ಬುಧವಾರ 5,164 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ 3,430 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 1,734 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು 18ರಿಂದ 44 ವರ್ಷದೊಳಗಿನ 1,995 ಮಂದಿ ಮೊದಲ ಡೋಸ್ ಹಾಗೂ 345 ಮಂದಿ ಎರಡನೇ ಡೋಸನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 1,422 ಮಂದಿ ಮೊದಲ ಡೋಸ್ ಹಾಗೂ 1367 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 19 ಮಂದಿ ಆರೋಗ್ಯ ಕಾರ್ಯ ಕರ್ತರು ಹಾಗೂ 16 ಮಂದಿ ಮುಂಚೂಣಿ ಕಾರ್ಯಕರ್ತರಿಗೂ ಇಂದು ಲಸಿಕೆ ನೀಡಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 5,04,175 ಮಂದಿ ಲಸಿಕೆಯ ಮೊದಲ ಡೋಸ್ ಪಡೆದರೆ, 1,79,296 ಮಂದಿ ಎರಡನೇ ಡೋಸ್‌ನ್ನು ಪಡೆದು ಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News