ಹಸಿವಿನಿಂದ ನರಳುತ್ತಿದ್ದ ವ್ಯಕ್ತಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಸಮ್ರೀನ್‌ಗೆ ಸಿಟಿಗೋಲ್ಡ್‌ನಿಂದ ಸನ್ಮಾನ

Update: 2021-07-28 16:59 GMT

ಮಂಗಳೂರು: ಹಸಿವಿನಿಂದ ನರಳುತ್ತಿದ್ದ ವ್ಯಕ್ತಿಗೆ ಆಹಾರ ನೀಡಿ ಉಪಚರಿಸಿ, ಮಾನವೀಯ ಸಂದೇಶ ಸಾರಿದ ಸಿಟಿ ಗೋಲ್ಡ್‌ನ ಉದ್ಯೋಗಿ ಸಮ್ರೀನ್ ಅವರಿಗೆ ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ಗಣ್ಯರು ಸನ್ಮಾನಿಸಿ, ಗೌರವಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿದ್ದ ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಮಾತನಾಡಿ, ಮಾನವೀಯತೆಗೆ ಹೆಸರಾದ ಸಮ್ರೀನ್ ಅವರ ಸಮಾಜಮುಖಿ ಕೆಲಸವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದಾಗ ಸಂತೋಷ ಎನಿಸಿತು. ಜಾತಿ, ಧರ್ಮ ಮೀರಿ ಸಮಾಜಕ್ಕೆ ಮಾನವೀಯ ಮೌಲ್ಯವನ್ನು ಸಾರಿದ್ದಾರೆ. ಮಾನವೀಯತೆಗೆ ಜ್ವಲಂತ ಸಾಕ್ಷಿಯೇ ಸಮ್ರೀನ್ ಎಂದು ಪ್ರಶಂಸಿಸಿದರು.

ಇನ್ನೋರ್ವ ಮುಖ್ಯಅತಿಥಿ ಜೆಡಿಎಸ್ ಸೆಕ್ಯುಲರ್ ಮಹಿಳಾ ವಿಂಗ್‌ನ ಅಧ್ಯಕ್ಷೆ ಸುಮತಿ ಎಸ್. ಹೆಗ್ಡೆ ಮಾತನಾಡಿ, ಸಹೃದಯಿ ಸಮ್ರಿನ್ ಜನಮೆಚ್ಚುವ ಕೆಲಸ ಮಾಡಿದ್ದಾರೆ. ಮಾನವೀಯ ವೌಲ್ಯಗಳನ್ನು ಅಳವಡಿಸಿಕೊಂಡವರಿಂದ ಮಾತ್ರ ಇಂತಹದ್ದನ್ನು ನಿರೀಕ್ಷಿಸಲು ಸಾಧ್ಯ. ಇವರಿಗೆ ಸಿಟಿಗೋಲ್ಡ್ ಸಂಸ್ಥೆ ಕೂಡ ಮಾರ್ಗದರ್ಶಿಯಾಗಿದೆ. ಸಂಸ್ಥೆ ಇನ್ನಷ್ಟು ಬೆಳೆದು ಸದೃಢವಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮ್ರೀನ್, ಆ ವ್ಯಕ್ತಿ ಉಡುಪಿಯಿಂದ ಚಿಕಿತ್ಸೆಗೆಂದು ಇಲ್ಲಿಗೆ ಬಂದಿದ್ದರು. ಹೊಟ್ಟೆಗೆ ಬಟ್ಟೆ ಕಟ್ಟಿದ್ದರು. ಹಸಿವಿನಿಂದ ನರಳುತ್ತಿದ್ದರು. ಜೊತೆಗೆ ಜ್ವರದಿಂದ ಬಳಲುತ್ತಿದ್ದರು. ನಂತರ ಗೊತ್ತಾಯಿತಿ ಆತ ಓರ್ವ ಹಾರ್ಟ್ ಪೇಶಂಟ್ ಅಂತ. ಇವರನ್ನು ಆಸ್ಪತ್ರೆಯಲ್ಲಿ ಎಲ್ಲರೂ ನಿರ್ಲಕ್ಷಿಸುತ್ತಿದ್ದುದು ನನಗೆ ಬೇಸರ ತರಿಸಿತು. ಸಹಾಯ ಮಾಡುವುದರ ಕುರಿತು ನನ್ನ ತಾಯಿ ಹಾಗೂ ಮಾತೃ ಸಂಸ್ಥೆ ಸಿಟಿಗೋಲ್ಡ್‌ನಲ್ಲೂ ಇಂತಹ ಮಾನವೀಯ ಮೌಲ್ಯಗಳನ್ನು ಹೇಳಿಕೊಡುತ್ತಾರೆ. ಹಾಗಾಗಿ ಆತನಿಗೆ ಆಹಾರ ನೀಡಿ, ಉಪಚರಿಸಿದೆ ಎಂದು ಹೇಳಿದರು.

ಮತ್ತೋರ್ವ ಮುಖ್ಯಅತಿಥಿ ಕಾಶಿಪಟ್ನ ದಾರುನ್ನೂರು ಎಜುಕೇಶನ್ ಸೆಂಟರ್‌ನ ಫಕಿರಬ್ಬ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಲ್ತಾಫ್ ತುಂಬೆ, ಸಿಟಿಗೋಲ್ಡ್ ಸಂಸ್ಥೆಯ ಮ್ಯಾನೇಜರ್ ಅಹ್ಮದ್ ಹಾಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಸಂಸ್ಥೆಯ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ತಮ್ನನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News