ಸರಕಾರಕ್ಕೆ ಸಲ್ಲಿಸಬೇಕಾದ ಪ್ರಸ್ತಾವಕ್ಕೆ ಮನಪಾ ಪೂರ್ವಭಾವಿ ಅನುಮತಿ: ಆರೋಪ

Update: 2021-07-28 18:00 GMT

ಮಂಗಳೂರು, ಜು.28: ನಗರದ ಬೋಂದೆಲ್ ಜಂಕ್ಷನ್ ಸಮೀಪ 9.4 ಎಕರೆ ಜಾಗದಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಐಟಿ ಪಾರ್ಕ್ ನಿರ್ಮಿಸಲು ಮುಂದಾಗಿದೆ. ಈ ಬಗ್ಗೆ ಜಮೀನನ್ನು ಟಿಡಿಆರ್ ಮೂಲಕ ಪಡೆಯಲು ಸರಕಾರದ ಅನುಮತಿ ಕೋರಬೇಕಾಗಿತ್ತು. ಆದರೆ ಇದಕ್ಕಾಗಿ ಮನಪಾ ಪರಿಷತ್‌ನ ಮಂಜೂರಾತಿ ಪಡೆಯುವ ಮೊದಲೇ ಪೂರ್ವಭಾವಿ ಮಂಜೂರಾತಿ ನೀಡಿದ ಆರೋಪ ಕೇಳಿ ಬಂದಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.

ಈ ಜಾಗವನ್ನು ಬಳಕೆ ಮಾಡಲು ಯೋಗ್ಯವಾಗಿದೆಯೇ ಇಲ್ಲವೇ ಎಂದು ಮನಪಾ ಮೇಯರ್ ಅಧ್ಯಕ್ಷತೆಯಲ್ಲಿ ತಂಡ ರಚಿಸಿ ಸ್ಥಳ ಪರಿಶೀಲನೆ ನಡೆಸಿ ತೀರ್ಮಾನ ಮಾಡಬೇಕು. ಯೋಗ್ಯ ಸ್ಥಳವೆಂದು ಕಂಡುಬಂದಲ್ಲಿ ಮನಪಾ ಸ್ವಾಧೀನಪಡಿಸಿ ಅಭಿವೃದ್ಧಿಪಡಿಸುವಂತೆ ಶಾಸಕ ಡಾ.ಭರತ್ ಶೆಟ್ಟಿ ಪತ್ರದಲ್ಲಿ ಕೋರಿದ್ದಾರೆ. ಆ ಪ್ರಕಾರ ಈ ಸ್ಥಳದ ವರದಿ ಪಡೆಯಲು ಮನಪಾ ಅಧಿಕಾರಿಗಳನ್ನೊಳಗೊಂಡ ವಿಶೇಷ ತಜ್ಞರು, ಮೇಯರ್, ಸಚೇತಕರು, ವಿಪಕ್ಷ ನಾಯಕರ ತಂಡ ರಚಿಸಿ ಸ್ಥಳದ ಕುರಿತು ಕೂಲಂಕಷ ಪರಿಶೀಲನೆ ಆಗಬೇಕು. ಸ್ಥಳ ಯೋಗ್ಯ ವೆಂದು ಕಂಡು ಬಂದಲ್ಲಿ ಮಾತ್ರ ಸ್ವಾಧೀನಪಡಿಸಲು ಕ್ರಮ ಕೈಗೊಳ್ಳುವಂತೆ ಮೇಯರ್ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಪಾಲಿಕೆಯಲ್ಲಿ ನಿರ್ಣಯವಾಗಿರುತ್ತದೆ.

ಕಳೆದ ಎಪ್ರಿಲ್ 16 ರಂದು ಶಾಸಕ ಡಾ.ಭರತ್ ಶೆಟ್ಟಿ ಮನಪಾಕ್ಕೆ ಬರೆದ ಪತ್ರದಲ್ಲಿ ಐಟಿ/ಇಲೆಕ್ಟ್ರಾನಿಕ್ ಪಾರ್ಕ್‌ಗಳ ನಿರ್ಮಾಣವಾಗದೇ ಇರುವುದರಿಂದ ಮಂಗಳೂರು ಒಂದು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿ ಬೆಳೆದಿಲ್ಲ. ಮಂಗಳೂರು ನಗರದಲ್ಲಿ ಈ ಉದ್ದೇಶಕ್ಕೆ ಸಾಕಷ್ಟು ಸರಕಾರಿ ಜಮೀನು ಲಭ್ಯವಿಲ್ಲದೇ ಇರುವುದರಿಂದ ಮತ್ತು ಖಾಸಗಿ ಜಮೀನು ಖರೀದಿ ಮಾಡು ವುದು ವೆಚ್ಚದಾಯಕವಾಗಿದೆ. ಆದುದರಿಂದ ವಿಸ್ತಾರವಾದ ಸುಮಾರು 10 ಎಕರೆಯಷ್ಟು ಜಮೀನು ಹೊಂದಿರುವವರನ್ನು ಟಿಡಿಆರ್ ಮೂಲಕ ಭೂಮಿ ನೀಡುವಂತೆ ಮನವೊಲಿಸಿದಲ್ಲಿ ಭೂಮಿ ಪಡೆಯ ಬಹುದಾಗಿದೆ. ಈ ರೀತಿ ಭೂಮಿಯನ್ನು ಪಾಲಿಕೆಯು ಸಮಗ್ರ ಇಲೆಕ್ಟ್ರಾನಿಕ್ಸ್ ಪಾರ್ಕ್ ಗಾಗಿ ಪಡೆದುಕೊಂಡ ನಂತರ ಅದನ್ನು ಮಂಗಳೂರು ಸ್ಮಾರ್ಟ್ ಸಿಟಿ ಕಂಪೆನಿ ಲಿಮಿಟೆಡ್‌ಗೆ ಅಥವಾ ಸರಕಾರದ ಇತರ ಸಂಸ್ಥೆಗಳಿಗೆ ಅಭಿವೃದ್ಧಿಗಾಗಿ ನೀಡಬಹುದಾಗಿದೆ. ಕೆಟಿಸಿಪಿ ಕಾಯ್ದೆ 14 ಬಿಯಡಿಯಲ್ಲಿ ಸಮಗ್ರ ಇಲೆಕ್ಟ್ರಾನಿಕ್ಸ್ ಪಾರ್ಕ್‌ಗಾಗಿ ಸುಮಾರು 10 ಎಕರೆಯಷ್ಟು ಜಮೀ ನನ್ನು ಪಡೆದು ಕೊಳ್ಳಲು ಸರಕಾರದ ಅನುಮತಿ ಕೋರುವಂತೆ ಪತ್ರದಲ್ಲಿ ಕೋರಿಕೊಂಡಿದ್ದಾರೆ. ಅಲ್ಲದೆ ಎಲೆಕ್ಟ್ರಾನಿಕ್ ಪಾರ್ಕ್ ನಿರ್ಮಾಣಕ್ಕಾಗಿ ಸುಮಾರು 10 ಎಕರೆಯಷ್ಟು ಜಮೀನನ್ನು ಟಿಡಿಆರ್ ಮೂಲಕ ಪಡೆಯಲು ಜಮೀನಿಗೆ ಅಗತ್ಯವಾದ ವಿಶೇಷತೆಯನ್ನು ನಿಗದಿಪಡಿಸಿಕೊಂಡು ಪತ್ರಿಕಾ ಪ್ರಕಟನೆ ನೀಡಿದಲ್ಲಿ ಉತ್ತಮ ರೀತಿಯ ಜಮೀನು ದೊರಕಬಹುದು ಎಂದು ಉಲ್ಲೇಖಿಸಿದ್ದಾರೆ.

ಶಾಸಕರ ಈ ಕೋರಿಕೆಯಂತೆ ಇಲೆಕ್ಟ್ರಾನಿಕ್ಸ್ ಪಾರ್ಕ್ ನಿರ್ಮಾಣಕ್ಕಾಗಿ ಜಮೀನನ್ನು ಟಿಡಿಆರ್ ಮೂಲಕ ಪಡೆಯಲು ಸರಕಾರದ ಅನುಮತಿ ಕೋರುವ ಕುರಿತು ತೀರ್ಮಾನಕ್ಕಾಗಿ ಮನಪಾದಲ್ಲಿ ಜುಲೈ 29ರಂದು ನಡೆಯಲಿರುವ ಪರಿಷತ್‌ನ ಕಾರ್ಯಸೂಚಿಯಲ್ಲಿ ಮಂಡಿಸಲಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಮತ್ತು ಚರ್ಚೆಗೆ ಕಾರಣವಾಗಿದೆ.

ಇದೆ ವಿಷಯಕ್ಕೆ ಸಂಬಂಧಿಸಿ ಮನಪಾ ಕಚೇರಿಯಿಂದ ಟಿಪ್ಪಣಿಯನ್ನು ಪರಿಶೀಲಿಸಲಾಗಿದೆ. ಮನಪಾ ವ್ಯಾಪ್ತಿಯಲ್ಲಿ ಐಟಿ/ಇಲೆಕ್ಟ್ರಾನಿಕ್ ಪಾರ್ಕ್‌ಗಳ ನಿರ್ಮಾಣಕ್ಕಾಗಿ ಜಮೀನನ್ನು ಟಿಡಿಆರ್ ಮೂಲಕ ಪಡೆಯಲು ಸರಕಾರದ ಅನುಮತಿ ಕೋರಲು ಪರಿಷತ್ತಿನ ಮಂಜೂರಾತಿ ನಿರೀಕ್ಷಿಸಿ ಪೂರ್ವಭಾವಿ ಮಂಜೂರಾತಿ ನೀಡಿದೆ ಎಂದು ತಿಳಿಸಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಶಾಸಕ ಭರತ್ ಶೆಟ್ಟಿಯವರನ್ನು 'ವಾರ್ತಾಭಾರತಿ' ಸಂಪರ್ಕಿಸಿದಾಗ ಅವರಿಂದ ಸಮರ್ಪಕ ಪ್ರತಿಕ್ರಿಯೆ ದೊರೆತಿಲ್ಲ.

''ಐಟಿ ಪಾರ್ಕ್ ನಿರ್ಮಿಸಲು ಮಹಾನಗರ ಪಾಲಿಕೆಯಲ್ಲಿ ಅಜೆಂಡಾ ಇಟ್ಟು ಭೂಮಿ ವಶಪಡಿಸಿಕೊಳ್ಳಲು ಅವಕಾಶವಿಲ್ಲ. ಇದು ಕಾನೂನುಬಾಹಿರ ಪ್ರಕ್ರಿಯೆ. ಮನಪಾ ವ್ಯಾಪ್ತಿಯಲ್ಲಿ ಟಿಡಿಆರ್ ಮೂಲಕ ಜಾಗ ಪಡೆಯಲು ಅವಕಾಶ ಇರುವುದು ಮಕ್ಕಳ ಆಟದ ಬಯಲು, ಉದ್ಯಾನವನ, ನೀರು ಸರಬರಾಜು, ಒಳಚರಂಡಿ, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮಾತ್ರ. ಐಟಿ ಪಾರ್ಕ್ ಕೈಗಾರಿಕಾ ವ್ಯಾಪ್ತಿಗೆ ಬರುವುದರಿಂದ ಕೆಐಎಡಿಬಿ ಮೂಲಕ ಭೂಮಿ ಖರೀದಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿರುವಂತೆ ಕಾಣುತ್ತಿದೆ. ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವುದು ಬಹಿರಂಗವಾಗಬೇಕಾಗಿದೆ. ಈ ಬಗ್ಗೆ ಪರಿಷತ್ತಿನ ಸಭೆಯಲ್ಲಿ ಪ್ರಶ್ನಿಸಲಾಗುವುದು''.

- ಎ.ಸಿ.ವಿನಯ ರಾಜ್, ವಿಪಕ್ಷ ನಾಯಕ, ಮನಪಾ

''ಇದು ಖಂಡಿತವಾಗಿಯೂ ದೊಡ್ಡ ರಿಯಲ್ ಎಸ್ಟೇಟ್ ಹಗರಣದಂತೆ ಕಾಣುತ್ತದೆ. ಆಸಕ್ತಿಯಿಂದಲೇ ಈ ಯೋಜನೆಯನ್ನು ನಿಯಮ ಬಾಹಿರವಾಗಿ ನಗರ ಪಾಲಿಕೆಯ ಮೂಲಕ ಸಾಧಿಸಲು ಹೊರಟಿದ್ದಾರೆ. ದೇಶದ ಯಾವ ನಗರ ಪಾಲಿಕೆಗಳೂ, ಸ್ಥಳೀಯ ಆಡಳಿತಗಳೂ ಐಟಿ ಪಾರ್ಕ್ ನಿರ್ಮಿಸಲು ಮುಂದಾದ ಉದಾಹರಣೆ ಇಲ್ಲ. ಶಾಸಕರು ನೇರವಾಗಿ ತಮ್ಮದೇ ರಾಜ್ಯ ಸರಕಾರದ ಮಟ್ಟದಲ್ಲಿ ಐಟಿ ಪಾರ್ಕ್ ಯೋಜನೆ ಜಾರಿಗೆ ಯತ್ನಿಸಲಿ. ನಗರ ಪಾಲಿಕೆಯ ಆಡಳಿತವನ್ನು ಈ ರೀತಿ ದುರ್ಬಳಕೆ ಮಾಡುವುದು ಸಲ್ಲದು. ಮಂಗಳೂರು ಪಾಲಿಕೆ ಐಟಿ ಪಾರ್ಕ್ ನಿರ್ಮಾಣ, ಅದಕ್ಕಾಗಿ ಟಿಡಿಆರ್ ಅಡಿ ಹತ್ತು ಎಕರೆ ಜಮೀನು ಖರೀದಿಸುವ ತರಾತುರಿಯ ನಡವಳಿಕೆ ಅನುಮಾನಾಸ್ಪದವಾಗಿದೆ''.

- ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್‌ಐ

''ಶಾಸಕ ಡಾ.ಭರತ್ ಶೆಟ್ಟಿ ಐಟಿ ಪಾರ್ಕ್ ಮಾಡುವ ಬಗ್ಗೆ ಮನಪಾಕ್ಕೆ ಪ್ರಸ್ತಾವ ಕೊಟ್ಟಿರುವುದು ಹೌದು. ಅದಕ್ಕಾಗಿ ಜಾಗ ಬೇಕಾಗಿತ್ತು. ಯಾರದೋ ಒಬ್ಬರ ಜಾಗ ಖರೀದಿ ಮಾಡುವುದು ಸರಿಯಲ್ಲ ಎನ್ನುವ ವಿಚಾರ ಬಂತು. ಅದಕ್ಕಾಗಿ ನಗರ ಪ್ರದೇಶದಲ್ಲಿ ಐಟಿ ಪಾರ್ಕ್ ಉದ್ದೇಶಕ್ಕಾಗಿ ಜಾಗ ನೀಡುವವರಿದ್ದರೆ ಟಿಡಿಆರ್ ಮೂಲಕ ಖರೀದಿಸಲು ಪತ್ರಿಕಾ ಪ್ರಕಟನೆ ನೀಡುವ ಮತ್ತು ಸರಕಾರದ ಅನುಮೋದನೆಗಾಗಿ ಅಜೆಂಡಾದಲ್ಲಿ ಇಟ್ಟಿದ್ದೇವೆ. ಇದು ಕಳೆದ ಮನಪಾ ಸಭೆಯಲ್ಲಿ ಪ್ರಸ್ತಾವ ಬಂದಿತ್ತು''.

- ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News