​ಭಾರತದ ಲಸಿಕೆ ಅಭಿಯಾನಕ್ಕೆ 25 ದಶಲಕ್ಷ ಡಾಲರ್ ಅಮೆರಿಕ ನೆರವು

Update: 2021-07-29 04:55 GMT
Photo: twitter.com/SecBlinken

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ವಿರುದ್ಧದ ಲಸಿಕಾ ಅಭಿಯಾನಕ್ಕೆ ಅಮೆರಿಕ 25 ದಶಲಕ್ಷ ಡಾಲರ್ ನೆರವು ನೀಡುವುದಾಗಿ ಭಾರತಕ್ಕೆ ಭೇಟಿ ನಿಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಭರವಸೆ ನೀಡಿದ್ದಾರೆ.

ಸಾಂಕ್ರಾಮಿಕ ಹಾಗೂ ಅದರ ವ್ಯತಿರಿಕ್ತ ಪರಿಣಾಮವನ್ನು ನಿಭಾಯಿಸುವ ನಿಟ್ಟಿನಲ್ಲಿ ಪರಸ್ಪರ ದೇಶಗಳ ನಡುವೆ ಸಹಕಾರ ಹೆಚ್ಚಿಸುವ ಸಂಬಂಧ ಉಭಯ ದೇಶಗಳ ಪ್ರತಿನಿಧಿಗಳ ನಡುವೆ ಬುಧವಾರ ಚರ್ಚೆ ನಡೆಯಿತು.

ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್, ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಅಮೆರಿಕ ನೀಡಿದ ಅದ್ಭುತ ಸಹಕಾರಕ್ಕೆ, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುಗಳ ಪೂರೈಕೆ ಸರಣಿಯನ್ನು ಮುಕ್ತಗೊಳಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಸಾಂಕ್ರಾಮಿಕದ ಕಾರಣದಿಂದಾಗಿ ಸೃಷ್ಟಿಯಾಗಿರುವ ಪ್ರಯಾಣದ ಸವಾಲಿನ ಬಗ್ಗೆ ಕೂಡಾ ಚರ್ಚೆ ನಡೆಸಿರುವುದಾಗಿ ಅವರು ವಿವರಿಸಿದರು.

ಅಮೆರಿಕ ರಾಯಭಾರ ಕಚೇರಿಯಲ್ಲಿ ನಡೆದ ಮತ್ತೊಂದು ಸಮಾರಂಭದಲ್ಲಿ ಮಾತನಾಡಿದ ಆಂಟೋನಿ, ಆಗಸ್ಟ್ ತಿಂಗಳ ಒಳಗಾಗಿ ಅಮೆರಿಕ ರಾಯಭಾರ ಕಚೇರಿ 68 ಸಾವಿರ ವಿದ್ಯಾರ್ಥಿಗಳ ವೀಸಾ ಸಂದರ್ಶನ ನಡೆಸಲು ಉದ್ದೇಶಿಸಿದ್ದು, ಇದು ಇತ್ತೀಚಿನ ವರ್ಷಗಲ್ಲೇ ಅತ್ಯಧಿಕ ಎಂದು ಹೇಳಿದರು. ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ಭಾರತ ನೀಡಿದ ಸಹಾಯಹಸ್ತವನ್ನು ಮರೆಯಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.

ಯುಎಸ್ ಏಜೆನ್ಸಿ ಫಾರ್ ಇಂಟರ್‌ ನ್ಯಾಷನಲ್ ಡೆವಲಪ್‌ಮೆಂಟ್ (ಯುಎಸ್‌ಎಐಡಿ) ಮೂಲಕ ಅಮೆರಿಕ ಸರ್ಕಾರ 25 ದಶಲಕ್ಷ ಡಾಲರ್ ನೆರವನ್ನು ಕೋವಿಡ್-19 ಲಸಿಕೆ ಕಾರ್ಯಕ್ರಮಕ್ಕೆ ನೀಡಲಿದೆ ಎಂದು ಆಂಟೋನಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News