ಪಾಣೆಮಂಗಳೂರು ಸೇತುವೆ ಬಳಿ ಬೈಕ್ ಚಾಲನೆಯಲ್ಲಿಟ್ಟು ಸವಾರ ನಾಪತ್ತೆ

Update: 2021-07-29 04:35 GMT

ಬಂಟ್ವಾಳ, ಜು.29: ಪಾಣೆಮಂಗಳೂರು ಹೊಸ ಸೇತುವೆಯಲ್ಲಿ ಬುಧವಾರ ಮಧ್ಯ ರಾತ್ರಿ ಬೈಕ್ ಚಾಲನೆಯಲ್ಲಿಟ್ಟು ಬೈಕ್ ಸವಾರ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಬೈಕ್ ಪೊಲೀಸರ ವಶದಲ್ಲಿದ್ದು ಸವಾರನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮೂಲತ: ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29) ನಾಪತ್ತೆಯಾದ ಯುವಕ. ಆತ ಬೆಂಗಳೂರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. 

ಈತ ಸುಮಾರು 15 ದಿನಗಳ ಹಿಂದೆ ಇದೇ ರೀತಿ ನದಿಗೆ ಹಾರುವುದಕ್ಕೆ ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಆಗಮಿಸಿದ್ದ. ಆದರೆ ಸ್ಥಳೀಯರು ಆತನನ್ನು ರಕ್ಷಿಸಿ ಬಳಿಕ ಬಂಟ್ವಾಳ ನಗರ ಪೊಲೀಸರು ಆತನ ಪೋಷಕರನ್ನು ಕರೆಸಿ ಕಳುಹಿಸಿಕೊಟ್ಟಿದ್ದರು.

ಆತನ‌ ಬೈಕ್ ಬುಧವಾರ ಮುಂಜಾನೆ 4.30ರ ಸುಮಾರಿಗೆ ಮತ್ತೆ ಪಾಣೆಮಂಗಳೂರು ಸೇತುವೆಯ ಮೇಲೆ ಕಂಡುಬಂದಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೈಕ್ ಸ್ಟಾರ್ಟ್ ನಲ್ಲೇ ಇತ್ತು ಎನ್ನಲಾಗಿದೆ. ಬಳಿಕ ಎ.ಎಸ್.ಐ ದೇವಪ್ಪ ಹಾಗೂ ಎಚ್‌ಸಿ ಸುರೇಶ ಪಡಾರ್ ಮಾಹಿತಿ ಪಡೆದು ಬೈಕನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಜು.17ರಂದು ತಾಯಿಯಿಂದ ಪೆಟ್ರೋಲ್ ಹಾಕುವುದಕ್ಕೆ 200 ರೂ. ಪಡೆದು ಕೆಲಸಕ್ಕೆಂದು ತೆರಳಿದ್ದನು. ಆದರೆ ಕೆಲಸಕ್ಕೆ ಹೋಗದೇ ಇದ್ದು ರಾತ್ರಿ‌ 11ರ ಸುಮಾರಿಗೆ ತಾಯಿಗೆ ಕರೆ ಮಾಡಿ ಸ್ನೇಹಿತನ ಮನೆಯಲ್ಲಿರುವುದಾಗಿ‌ ತಿಳಿಸಿದ್ದಾನೆ. ಆತ ಮೊಬೈಲ್ ಆನ್ಲೈನ್ ಗೇಮ್ ಮೂಲಕ ಸಾಕಷ್ಟು ಹಣ ಕಳೆದುಕೊಂಡಿದ್ದು ಹೀಗಾಗಿ ಆತ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆತನ ನಾಪತ್ತೆಯ ಕುರಿತು ಬೆಂಗಳೂರಿನ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ. ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News