ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಜಾರ್ಖಂಡ್ ನ್ಯಾಯಾಧೀಶರ ಸಾವು; ಕೊಲೆ ಶಂಕೆ ಮೂಡಿಸುತ್ತಿರುವ ಸಿಸಿಟಿವಿ ದೃಶ್ಯಗಳು

Update: 2021-07-29 09:50 GMT
Photo: Twitter/@manishndtv

ಧನ್‍ಬಾದ್ : ಜಾರ್ಖಂಡ್‍ನ ಧನ್‍ಬಾದ್ ಎಂಬಲ್ಲಿನ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಹಿಟ್ ಆ್ಯಂಡ್ ರನ್ ಪ್ರಕರಣವೊಂದರಲ್ಲಿ ಮೃತಪಟ್ಟ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇದೊಂದು ಕೊಲೆಯಾಗಿರಬಹುದೇ ಎಂಬ ಸಂಶಯವನ್ನು ಹುಟ್ಟು ಹಾಕಿದೆ. ಈ ವಿಚಾರವನ್ನು ಇಂದು ಸುಪ್ರೀಂ ಕೋರ್ಟಿನಲ್ಲಿ ವಕೀಲರೊಬ್ಬರು ಎತ್ತಿದ್ದು "ಇದು ನ್ಯಾಯಾಂಗದ ಮೇಲೆ ನಡೆದ ಬಹಿರಂಗ ದಾಳಿ,'' ಇದರ ಕುರಿತು ಸಿಬಿಐ ತನಿಖೆ ನಡೆಯಬೇಕೆಂದು ಅವರು ಹೇಳಿದ್ದಾರೆ.

ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ಉತ್ತಮ್ ಆನಂದ್ ಅವರು ಜಾಗಿಂಗ್ ಹೋಗಿದ್ದ ಸಮಯ ಅವರ ಮನೆಯಿಂದ ಅರ್ಧ ಕಿಮೀ ದೂರದಲ್ಲಿ ಅಪರಿಚಿತ ವಾಹನವೊಂದು ಅವರಿಗೆ ಢಿಕ್ಕಿ ಹೊಡೆದಿತ್ತು.

ಆದರೆ ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದಾಗ ಬೆಳಿಗ್ಗೆ 5 ಗಂಟೆಗೆ ನಿರ್ಜನ ರಸ್ತೆಯಲ್ಲಿ ಅವರು ಜಾಗಿಂಗ್ ಮಾಡುತ್ತಿರುವುದಾಗ ಟೆಂಪೋ ವೊಂದು ನೇರವಾಗಿ ಅವರತ್ತವೇ ಸಾಗಿ ನಂತರ ಅವರಿಗೆ ಢಿಕ್ಕಿ ಹೊಡೆದು ಪರಾರಿಯಾಗುವುದು ಕಾಣಿಸುತ್ತದೆ.

ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ದಾರಿಹೋಕರೊಬ್ಬರು ಆಸ್ಪತ್ರೆಗೆ ಸೇರಿಸಿದ್ದರೂ ಅವರು ಅಲ್ಲಿ ಮೃತಪಟ್ಟರು. ಅವರು ಮೃತಪಟ್ಟ ಹಲವು ಗಂಟೆಗಳ ಕಾಲ ಯಾರಿಗೂ ಅವರ ಗುರುತು ತಿಳಿದಿರಲಿಲ್ಲ.

ಬೆಳಿಗ್ಗೆ  7 ಗಂಟೆಯಾದರೂ ಅವರು ವಾಪಸಾಗದೇ ಇದ್ದಾಗ ಅವರ ಕುಟುಂಬ ನಾಪತ್ತೆ ದೂರು ದಾಖಲಿಸಿತ್ತು. ಕೊನೆಗೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರೆಂದು ಪೊಲೀಸರು ಕಂಡುಕೊಂಡಿದ್ದರು.

ಆದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಇದೊಂದು  ಉದ್ದೇಶಪೂರ್ವಕ ಕೃತ್ಯವೆಂದು ಕಂಡು ಬಂದಿದೆ. ಮೇಲಾಗಿ ನ್ಯಾಯಾಧೀಶರಿಗೆ ಢಿಕ್ಕಿ ಹೊಡೆದ ವಾಹನವನ್ನು ಘಟನೆಗಿಂತ ಕೆಲವೇ ಗಂಟೆಗಳ ಮೊದಲು ಕಳವುಗೈಯ್ಯಲಾಗಿತ್ತು.

ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದ ಹಲವು ಪ್ರಕರಣಗಳನ್ನು ಪೊಲೀಸರು ಪರಾಮರ್ಶಿಸುತ್ತಿದ್ದಾರೆ. ಧನ್‍ಬಾದ್‍ನಲ್ಲಿ ನಡೆದ ಮಾಫಿಯಾ ಕೊಲೆಗಳ ಪ್ರಕರಣಗಳ ವಿಚಾರಣೆಯನ್ನೂ ಅವರು ನಡೆಸುತ್ತಿದ್ದರಲ್ಲದೆ ಇತ್ತೀಚೆಗೆ ಇಬ್ಬರು ಗ್ಯಾಂಗ್ಸ್ಟರ್ ಗಳ ಜಾಮೀನು ಅಪೀಲುಗಳನ್ನೂ ತಿರಸ್ಕರಿಸಿದ್ದರು.

ಈ ಘಟನೆಯನ್ನು ಇಂದು ಸುಪ್ರೀಂ ಕೋರ್ಟಿನಲ್ಲಿ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠದ ಮುಂದೆ ಪ್ರಸ್ತಾಪಿಸಿದ ವಕೀಲ ವಿಕಾಸ್ ಸಿಂಗ್, ಈ ಘಟನೆಯನ್ನು ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರಲ್ಲದೆ ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿ ಇದಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News