ಅಸ್ಸಾಂ- ಮಿಝೋರಾಂ ಗಡಿ ಹಿಂಸಾಚಾರಕ್ಕೆ ಕಾರಣವಾದ ಸಂಸದನ ಪ್ರಚೋದನಾಕಾರಿ ಹೇಳಿಕೆ ?

Update: 2021-07-29 06:25 GMT
ಕೆ.ವನ್ಲಲ್ವೇನಾ

ಗುವಾಹತಿ: ಅಸ್ಸಾಂ- ಮಿಝೋರಾಂ ಗಡಿಯಲ್ಲಿ ಮಿಜೋ ಪೊಲೀಸರು ಸೋಮವಾರ ನಡೆಸಿದ ಉದ್ದೇಶಪೂರ್ವಕ ಮತ್ತು ಅಪ್ರಚೋದಿತ ದಾಳಿಗೆ ಮಿಝೋರಾಂ ರಾಜ್ಯಸಭಾ ಸದಸ್ಯ ಕೆ.ವನ್ಲಲ್ವೇನಾ ಅವರ ಪ್ರಚೋದನಾಕಾರಿ ಹೇಳಿಕೆ ಕಾರಣ ಎಂಬ ಆರೋಪದಲ್ಲಿ ಸಂಸದರನ್ನು ಪ್ರಶ್ನಿಸಲು ಅಸ್ಸಾಂ ಪೊಲೀಸ್ ತಂಡ ದೆಹಲಿಗೆ ತೆರಳಲಿದೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಎರಡು ರಾಜ್ಯಗಳ ನಡುವಿನ ಗಡಿ ಸಂಘರ್ಷದಲ್ಲಿ ಆರು ಮಂದಿ ಪೊಲೀಸರು ಹಾಗೂ ಒಬ್ಬ ನಾಗರಿಕ ಹತರಾಗಿದ್ದರು. ಈ ಪಿತೂರಿಯಲ್ಲಿ ಮಿಝೋರಾಂ ಸಂಸದನ ಪಾತ್ರ ಇದೆ ಎನ್ನುವುದು ಅಸ್ಸಾಂ ಪೊಲೀಸರ ಆರೋಪ. ಅಸ್ಸಾಂ ಪೊಲೀಸರ ವಿರುದ್ಧ ಸಂಸದ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಸಂಸತ್ ಭವನದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ವನ್ಲಲ್ವೇನಾ "200ಕ್ಕೂ ಹೆಚ್ಚು ಪೊಲೀಸರು ನಮ್ಮ ಭೂಪ್ರದೇಶಕ್ಕೆ ಪ್ರವೇಶಿಸಿ, ನಮ್ಮ ಪೊಲೀಸರನ್ನು ನಮ್ಮದೇ ಪೊಲೀಸ್ ನೆಲೆಗಳಿಂದ ಹಿಂದಕ್ಕೆ ಕಳುಹಿಸಿದ್ದಾರೆ. ಮೊದಲು ಗುಂಡು ಹೊಡೆಯಲು ಆದೇಶ ನೀಡಿದ್ದು ಅವರು. ಅವರು ಪುಣ್ಯವಂತರು. ನಾವು ಅವರೆಲ್ಲರನ್ನೂ ಹತ್ಯೆ ಮಾಡಿಲ್ಲ. ಮತ್ತೆ ಅವರು ಬಂದರೆ ಅವರೆಲ್ಲರನ್ನೂ ನಾವು ಹತ್ಯೆ ಮಾಡಬೇಕಾಗುತ್ತದೆ" ಎಂದು ಹೇಳಿದ್ದರು.

ಈ ಸಂಬಂಧ ಅಸ್ಸಾಂ ಪೊಲೀಸ್ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿ ಜಿ.ಪಿ.ಸಿಂಗ್ ಟ್ವೀಟ್ ಮಾಡಿ, "ಮಾಧ್ಯಮಕ್ಕೆ ಸಂದರ್ಶನ ನೀಡಿದ ರಾಜ್ಯಸಭಾ ಸದಸ್ಯ ಕೆ.ವನ್ಲಲ್ವೇನಾ ಅವರು ಪಿತೂರಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಕ್ರಮ ಕೈಗೊಳ್ಳಲು ಉದ್ದೇಶಿಸಿದೆ" ಎಂದು ಪ್ರಕಟಿಸಿದ್ದರು.

ಅಸ್ಸಾಂ ಪೊಲೀಸರ ಮೇಲೆ ದಾಳಿ ನಡೆಸಿದ ಮಿಝೋರಾಂ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರ ಬಗೆಗಿನ ’ಚಿತ್ರ ಗ್ಯಾಲರಿ’ಯನ್ನು ಪೊಲೀಸ್ ಇಲಾಖೆ ಸಿದ್ಧಪಡಿಸಿದೆ. ದಾಳಿಕೋರರ ಬಗ್ಗೆ ಮಾಹಿತಿ ನಿಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಪೊಲೀಸ್ ಇಲಾಖೆ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News