ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಪ್ರಕರಣ: ಹೆತ್ತವರನ್ನು ದೂಷಿಸಿ ಟೀಕೆಗೆ ಗುರಿಯಾದ ಗೋವಾ ಮುಖ್ಯಮಂತ್ರಿ

Update: 2021-07-29 15:05 GMT

ಹೊಸದಿಲ್ಲಿ: ಕಳೆದ ವಾರ ಇಬ್ಬರು ಅಪ್ರಾಪ್ತ ಬಾಲಕಿಯರ ಸಾಮೂಹಿಕ ಅತ್ಯಾಚಾರ ಹಾಗೂ  ಇಬ್ಬರು ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ಪ್ರಕರಣ ನಡೆದ ನಂತರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಘಟನೆಯ ಬಗ್ಗೆ ಸಂತ್ರಸ್ತರು  ಹಾಗೂ  ಅವರ ಹೆತ್ತವರನ್ನು ದೂಷಿಸಿದ್ದಾರೆ. ಈ ಮೂಲಕ ತಮ್ಮ ಸರಕಾರ ಹಾಗೂ ಪೊಲೀಸರನ್ನು ರಕ್ಷಿಸಲು ಮುಂದಾಗಿರುವುದಕ್ಕೆ ಟೀಕೆಗೆ ಗುರಿಯಾಗಿದ್ದಾರೆ.  

ನಿನ್ನೆ ಅಸೆಂಬ್ಲಿಯಲ್ಲಿ ನೀಡಿದ ಸಂಪೂರ್ಣ ಆಘಾತಕಾರಿ ಹೇಳಿಕೆಯೊಂದರಲ್ಲಿ ಸಾವಂತ್ ಅವರು ರಾಜಧಾನಿ ಪಣಜಿಯಿಂದ 30 ಕಿ.ಮೀ ದೂರದಲ್ಲಿರುವ ಬೀಚ್‌ನಲ್ಲಿ ತಡರಾತ್ರಿ ತನಕ ಇದ್ದ ತಮ್ಮ ಮಕ್ಕಳನ್ನು ಹೊರಗೆ ಹೋಗಲು ಅನುಮತಿಸಿದ್ದಕ್ಕಾಗಿ ಪೋಷಕರನ್ನು ದೂಷಿಸಿದರು.  

"14 ವರ್ಷದ ಮಕ್ಕಳು ಇಡೀ ರಾತ್ರಿ ಕಡಲತೀರದಲ್ಲಿದ್ದಾಗ ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳು ಮಾತನ್ನು ಕೇಳದ ಕಾರಣಕ್ಕಾಗಿ ನಾವು ಸರಕಾರ ಹಾಗೂ ಪೊಲೀಸರ ಮೇಲೆ ಜವಾಬ್ದಾರಿಯನ್ನು ಹೊರಿಸಲು ಸಾಧ್ಯವಿಲ್ಲ" ಎಂದು ಗೃಹ ಸಚಿವಾಲಯದ ಹುದ್ದೆ ಹೊಂದಿರುವ ಮುಖ್ಯಮಂತ್ರಿ ಹೇಳಿದ್ದಾರೆ.

ತಮ್ಮ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವುದು ಪೋಷಕರ ಕರ್ತವ್ಯವಾಗಿದೆ ಹಾಗೂ  ಹುಡುಗಿಯರು ರಾತ್ರಿಯಲ್ಲಿ ಮನೆಯಿಂದ ಹೊರಹೋಗಲು ಅನುಮತಿಸಬಾರದು. ವಿಶೇಷವಾಗಿ ಅವರು ಅಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ಸಾವಂತ್ ಹೇಳಿದರು.

"ನಾವು ಪೊಲೀಸರನ್ನು ದೂಷಿಸುತ್ತೇವೆ ... ಆದರೆ ಪಾರ್ಟಿಗಾಗಿ ಬೀಚ್‌ಗೆ ಹೋದ 10 ಯುವಕರಲ್ಲಿ ನಾಲ್ವರು ಇಡೀ ರಾತ್ರಿ ಬೀಚ್‌ನಲ್ಲಿಯೇ ಇದ್ದರು ... ಇಬ್ಬರು ಹುಡುಗರು ಹಾಗೂ ಇಬ್ಬರು ಹುಡುಗಿಯರು. ಹದಿಹರೆಯದವರು, ವಿಶೇಷವಾಗಿ ಅಪ್ರಾಪ್ತ ವಯಸ್ಕರು, ಕಡಲತೀರಗಳಲ್ಲಿ ರಾತ್ರಿಗಳನ್ನು ಕಳೆಯಬಾರದು" ಎಂದು ಅವರು ಹೇಳಿದರು.

ಸಾವಂತ್  ಹೇಳಿಕೆಗಳು ವಿರೋಧ ಪಕ್ಷದ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ, ಅವರಲ್ಲಿ ಕೆಲವರು ಸಾವಂತ್ ಅವರ ರಾಜೀನಾಮೆಗೆ ಒತ್ತಾಯಿಸಿದರು ಹಾಗೂ  ಬಿಜೆಪಿ ಆಳ್ವಿಕೆಯಲ್ಲಿ ಗೋವಾ ರಾಜ್ಯವು ಮಹಿಳೆಯರಿಗೆ ಹೆಚ್ಚು ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಗೋವಾ ಕಾಂಗ್ರೆಸ್ ವಕ್ತಾರ ಆಲ್ಟೋನ್ ಡಿ ಕೋಸ್ಟಾ ಮುಖ್ಯಮಂತ್ರಿಯವರ ಹೇಳಿಕೆಗೆ ತಿರುಗೇಟು ನೀಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ್ದಾರೆ.

"ರಾತ್ರಿಯಲ್ಲಿ ತಿರುಗಾಡುವಾಗ ನಾವು ಯಾಕೆ ಭಯಪಡಬೇಕು? ಅಪರಾಧಿಗಳು ಜೈಲಿನಲ್ಲಿರಬೇಕು ಮತ್ತು ಕಾನೂನು ಪಾಲಿಸುವ ನಾಗರಿಕರು ಮುಕ್ತವಾಗಿ ಸುತ್ತಾಡಬೇಕು" ಎಂದು ಅವರು ಹೇಳಿದರು.

 ‘ಮುಖ್ಯಮಂತ್ರಿಗಳು ರಾತ್ರಿ ಹೊರಗೆ ತಿರುಗುವುದು ಸುರಕ್ಷಿತವಲ್ಲ ಎಂದು ಹೇಳಿ ತಮ್ಮ ಮಕ್ಕಳಿಗೆ ರಾತ್ರಿ ಹೊರಗೆ ಹೋಗಲು ಅವಕಾಶ ನೀಡಿದ್ದಕ್ಕಾಗಿ ಹೆತ್ತವರನ್ನು ದೂರಿರುವುದು ಆಘಾತಕಾರಿಯಾಗಿದೆ. ರಾಜ್ಯ ಸರಕಾರವು ನಮಗೆ ಸುರಕ್ಷತೆಯ ಭರವಸೆಯನ್ನು ನೀಡದಿದ್ದರೆ ಯಾರು ನೀಡುತ್ತಾರೆ? ಗೋವಾ ಮಹಿಳೆಯರ ಪಾಲಿಗೆ ಸುರಕ್ಷಿತ ರಾಜ್ಯವೆಂಬ ಇತಿಹಾಸವನ್ನು ಹೊಂದಿತ್ತು,ಆದರೆ ಬಿಜೆಪಿಯ ಆಡಳಿತದಲ್ಲಿ ರಾಜ್ಯವು ಆ ಹೆಗ್ಗಳಿಕೆಯನ್ನು ಕಳೆದುಕೊಂಡಿದೆ ’ಎಂದು ಪಕ್ಷೇತರ ಶಾಸಕ ರೋಹನ್ ಖಂವಟೆ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News