ತೆಲುಗಿನಲ್ಲಿಯೇ ಮಾತನಾಡಿ ಕಳೆದ 21 ವರ್ಷಗಳಿಂದ ಪ್ರತ್ಯೇಕವಾಗಿದ್ದ ದಂಪತಿಯನ್ನು ಒಗ್ಗೂಡಿಸಿದ ಸಿಜೆಐ ರಮಣ

Update: 2021-07-29 09:31 GMT
 ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ

ಹೊಸದಿಲ್ಲಿ: ಬುಧವಾರ ಸುಪ್ರೀಂ ಕೋರ್ಟಿನಲ್ಲಿ ನಡೆದ ಅಪರೂಪದ ವಿದ್ಯಮಾನವೊಂದರಲ್ಲಿ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ನ್ಯಾಯಾಲಯದ ಸಾಮಾನ್ಯ ಪರಿಪಾಠಗಳನ್ನು ಬದಿಗಿಟ್ಟು, ಕಳೆದ 21 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಆಂಧ್ರದ ದಂಪತಿಯನ್ನು ಜತೆಗೂಡಿಸುವಲ್ಲಿ ಸಫಲರಾದರು. ಈ ದಂಪತಿಗೆ ಇಂಗ್ಲಿಷ್ ಭಾಷೆ ಬಾರದೇ ಇದ್ದ ಕಾರಣ ಸಿಜೆಐ ಅವರೊಂದಿಗೆ ತೆಲುಗಿನಲ್ಲಿಯೇ ಮಾತನಾಡಿದ್ದಾರೆ ಎಂದು hindustantimes.com ವರದಿ ಮಾಡಿದೆ.

ದಂಪತಿ 2001ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತಿ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ಪತ್ನಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಪತಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದರೂ ಆಂಧ್ರ ಸರಕಾರದ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆ ವ್ಯಕ್ತಿ ಕಳೆದ 18 ವರ್ಷಗಳಿಂದ ತನ್ನ ಪರಿತ್ಯಕ್ತ ಪತ್ನಿ ಮತ್ತು ಪುತ್ರನಿಗೆ ಆರ್ಥಿಕ ಆಧಾರವಾಗಿದ್ದರು.

ಆ ವ್ಯಕ್ತಿಯನ್ನು ಗುಂಟೂರು ನ್ಯಾಯಾಲಯ 2002ರಲ್ಲಿ ದೋಷಿಯೆಂದು ಘೋಷಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ್ ಆತನ ಶಿಕ್ಷೆಯನ್ನು ಆತ ಅದಾಗಲೇ ಅನುಭವಿಸಿದ ಜೈಲು ಶಿಕ್ಷೆ ಅವಧಿಗೆ ಕಡಿತಗೊಳಿಸಿತ್ತು. ಇದರಿಂದ ಸಮಾಧಾನಗೊಳ್ಳದ ಪತ್ನಿ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದಳಲ್ಲದೆ ಕುಟುಂಬ ನ್ಯಾಯಾಲಯದ ಮೊರೆ ಹೋಗಿ ಜೀವನಾಂಶಕ್ಕಾಗಿ ಬೇಡಿಕೆಯಿರಿಸಿದ್ದಳು.

ಇತ್ತೀಚೆಗೆ ಈ ದಂಪತಿ ನಡುವೆ ಪಂಚಾತಿಕೆಗೆ ಸುಪ್ರೀಂ ಕೋರ್ಟ್ ಯತ್ನಿಸಿದ್ದರೂ ವಿಫಲರಾಗಿದ್ದರು. ಇತ್ತೀಚೆಗೆ ಸಿಜೆಐ ರಮಣ ಕೂಡ ಒಂದು ಪ್ರಯತ್ನ ನಡೆಸಿದ್ದರೂ ಪತಿಯ ಜೈಲು ಶಿಕ್ಷೆ ಅವಧಿ ಏರಿಸಬೇಕೆಂಬ ಬೇಡಿಕೆ ಪತ್ನಿಯಿಂದ ಬಂದಿತ್ತು. ಆತನ ಜೈಲು ಶಿಕ್ಷೆ ಹೆಚ್ಚಿಸಿದರೆ, ಆತನ ಕೆಲಸವೂ ಹೋಗಿ ಪತ್ನಿಗೆ ಜೀವನಾಂಶ ದೊರೆಯುವುದಿಲ್ಲ ಎಂದು ನ್ಯಾಯಾಲಯ ಆಕೆಗೆ ಮನವರಿಕೆ ಮಾಡುವ ಯತ್ನ ನಡೆಸಿತು.

ಬುಧವಾರ ದಂಪತಿ ನ್ಯಾಯಾಲಯಕ್ಕೆ ಹಾಜರಾದಾಗ ಮಹಿಳೆ ತನಗೆ ಇಂಗ್ಲಿಷ್ ಬರುವುದಿಲ್ಲವೆಂದು ಹೇಳಿದ್ದರು. ಆಗ ಸಿಜೆಐ ತೆಲುಗಿನಲ್ಲಿಯೇ ಮಾತನಾಡಿ ಜತೆಗೂಡಿ ಬಾಳುವಂತೆ ಮನವೊಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News