'ಕಳವಾಗಿದ್ದ' 14 ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್ ನೀಡಲಿರುವ ಆಸ್ಟ್ರೇಲಿಯಾ

Update: 2021-07-29 10:12 GMT
Photo credit: abc.net.au

ಸಿಡ್ನಿ: ಭಾರತಕ್ಕೆ ಸೇರಿದ 14 ಕಲಾಕೃತಿಗಳನ್ನು ಆಸ್ಟ್ರೇಲಿಯಾ ವಾಪಸ್ ನೀಡಲಿದೆ, ಇವುಗಳಲ್ಲಿ ಕನಿಷ್ಠ ಆರು ಕಲಾಕೃತಿಗಳು ಒಂದೋ ಕಳವುಗೈದವುಗಳಾಗಿವೆ ಅಥವಾ ಅಕ್ರಮವಾಗಿ ರಫ್ತುಗೊಳಿಸಲಾಗಿವೆ ಎಂದು ಅಲ್ಲಿನ ನ್ಯಾಷನಲ್ ಗ್ಯಾಲರಿ ಮಾಹಿತಿ ನೀಡಿದೆ.

ವಾಪಸ್ ನೀಡಲಾಗುವ ಕಲಾಕೃತಿಗಳಲ್ಲಿ ಶಿಲ್ಪಕಲೆಗಳು, ಛಾಯಾಚಿತ್ರಗಳು ಸೇರಿವೆ ಹಾಗೂ ಹೆಚ್ಚಿನವು ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳಿಗೆ ಸಂಬಂಧಿಸಿವೆ, ಕೆಲವು 12ನೇ ಶತಮಾನದವುಗಳಾಗಿವೆ, ಅವುಗಳ ಒಟ್ಟು ಮೌಲ್ಯ ಸುಮಾರು 2.2 ಅಮೆರಿಕನ್ ಡಾಲರ್ ಆಗಿರಬಹುದೆಂದು ಅಂದಾಜಿಸಲಾಗಿದೆ.

ಮುಂದಿನ ಕೆಲ ತಿಂಗಳುಗಳಲ್ಲಿ ಇವುಗಳನ್ನು ಭಾರತಕ್ಕೆ ವಾಪಸ್ ನೀಡಲಾಗುವುದು ಎಂದು ಕ್ಯಾನ್‍ಬೆರ್ರಾದಲ್ಲಿರುವ ನ್ಯಾಷನಲ್ ಗ್ಯಾಲರಿಯ ನಿರ್ದೇಶಕ ನಿಕ್ ಮಿತ್ಝೆವಿಚ್ ಹೇಳಿದ್ದಾರೆ.

ವಾಪಸ್ ನೀಡಲಾಗುವ ಕಲಾಕೃತಿಗಳ ಪೈಕಿ 13  ಮ್ಯಾನ್‍ಹಟನ್‍ನ ಮಾಜಿ ಕಲಾಕೃತಿ ವ್ಯಾಪಾರಿ, ಕಳ್ಳಸಾಗಣಿಕೆದಾರನೆಂದು ಗುರುತಿಸಲ್ಪಟ್ಟಿರುವ ಸುಭಾಷ್ ಕಪೂರ್ ಬಳಿಯಿದ್ದದ್ದು ಎನ್ನಲಾಗಿದ್ದು ಆತನ ಮೇಲೆ ಅಮೆರಿಕಾದ ತನಿಖಾ ಏಜನ್ಸಿಗಳು ಆಪರೇಷನ್ ಹಿಡನ್ ಐಡಲ್ ಎಂಬ ದೊಡ್ಡ ಮಟ್ಟದ ತನಿಖೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಆತನಿಂದ ಸ್ವಾಧೀನ ಪಡಿಸಲಾಗಿದ್ದ ಶಿವನ ಕಂಚಿನ ಮೂರ್ತಿಯನ್ನು ಈ ಹಿಂದೆಯೇ  ಭಾರತಕ್ಕೆ ಆಸ್ಟ್ರೇಲಿಯಾ ವಾಪಸ್ ನೀಡಿತ್ತು. ಈ ಮೂರ್ತಿಯನ್ನು ತಮಿಳುನಾಡಿನ ದೇವಸ್ಥಾನವೊಂದರಿಂದ ಕಳವುಗೈಯ್ಯಲಾಗಿತ್ತು.

2011ರಲ್ಲಿ ಆತನ ಬಂಧನವಾದ ನಂತರ ಅಮೆರಿಕ ಕೂಡ ಆತ ಕಳವುಗೈದಿದ್ದ ನೂರಾರು ಪ್ರಾಚೀನ ಕಲಾಕೃತಿಗಳನ್ನು ವಾಪಸ್ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News