ಮನಪಾ ಸಾಮಾನ್ಯ ಸಭೆಯಲ್ಲಿ ಐಟಿ ಪಾರ್ಕ್ ಬಗ್ಗೆ ಚರ್ಚೆ; ಯಾವುದೇ ನಿರ್ದಿಷ್ಟ ಜಾಗವನ್ನು ಗುರುತಿಸಿಲ್ಲ: ಮೇಯರ್‌

Update: 2021-07-29 10:13 GMT

ಮಂಗಳೂರು, ಜು.29: ನಗರ ವ್ಯಾಪ್ತಿಯಲ್ಲಿ ಐಟಿ ಪಾರ್ಕ್ ನಿರ್ಮಾಣದ ಕುರಿತಂತೆ ಎದ್ದಿರುವ ಆರೋಪವು ಇಂದು ಮಂಗಳೂರು ಮಹಾನಗರ ಪಾಲಿಕೆಯ ಮನಪಾ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು.

ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಸಂಬಂಧ ನಡೆದ ಚರ್ಚೆಯಲ್ಲಿ ವಿಪಕ್ಷ ನಾಯಕ ವಿನಯರಾಜ್ ಕಾರ್ಯ ಸೂಚಿಯಲ್ಲಿ ಉಲ್ಲೇಖಿಸಲಾದಂತೆ ಬೊಂದೇಲ್ ಬಳಿಯ 9.4 ಎಕರೆ ಜಮೀನನ್ನು ಟಿಡಿಆರ್ ನೀಡಿ ಪಡೆಯಲು ಮುಂದಾಗಿರುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿದರು.

ಈ ಬಗ್ಗೆ ಸಾಕಷ್ಟು ಚರ್ಚೆ, ಸದಸ್ಯರ ನಡುವೆ ವಾಗ್ವಾದ ನಡೆದ ಬಳಿಕ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿ, ಯಾವುದೇ ನಿರ್ದಿಷ್ಟ ಜಾಗವನ್ನು ಟಿಡಿಆರ್ ಮೂಲಕ ಭೂಸ್ವಾಧೀನ ಮಾಡಲಾಗುವುದಿಲ್ಲ ಎಂದರು.

ಸ್ಥಳೀಯ ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು ಕೂಡಾ ಈ ಬಗ್ಗೆ ಹೊಸತಾಗಿ ಪತ್ರ ಬರೆದು, ತಮ್ಮ ಕ್ಷೇತ್ರದಲ್ಲಿ ಐಟಿ ಪಾರ್ಕ್ ಉದ್ದೇಶಕ್ಕೆ ಜಾಗ ಬೇಕಾಗಿದೆ. ಸುಮಾರು 10 ಎಕರೆ ಜಾಗ ಹೊಂದಿರುವವರನ್ನು ಟಿಡಿಆರ್ ಮೂಲಕ ಭೂಮಿ ನೀಡುವಂತೆ ಮನವೊಲಿಸಿದ್ದಲ್ಲಿ ಭೂಮಿ ಪಡೆಯಬಹುದು ಎಂದು ತಿಳಿಸಿದ್ದಾರೆ. ಅದರಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಮಂಜೂರಾತಿ ಪಡೆಯಲಾಗುವುದು ಎಂದು ಹೇಳಿದರು. ಐಟಿ ಜಾಗಕ್ಕಾಗಿ ಬೊಂದೇಲ್‌ನ ಜಾಗದ ಬಗ್ಗೆ ಹಿಂದಿನ ಮೇಯರ್ ಆಡಳಿತಾವಧಿಯಲ್ಲಿಯೂ ಪ್ರಸ್ತಾಪವಾಗಿತ್ತು.

ಆ ಸಂದರ್ಭ ಸಮಿತಿ ಮಾಡಿ ಪರಿಶೀಲಿಸುವ ನಿರ್ಧಾರ ಮಾಡಲಾಗಿತ್ತು. ಆದರೆ ಆ ಕಾರ್ಯ ನಡೆದಿಲ್ಲ ಎಂದು ವಿಪಕ್ಷ ಸದಸ್ಯರಾದ ಅಬ್ದುಲ್ ರವೂಫ್ ಹೇಳಿದರು. ಪರಿಷತ್ ಕಾರ್ಯಸೂಚಿಯಲ್ಲಿ ಅದೇ ಜಮೀನಿನ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಜಮೀನಿನಲ್ಲಿ ಐಟಿ ಪಾರ್ಕ್ ಕಾರ್ಯಸಾಧ್ಯತೆ (ಫಿಸಿಬಿಲಿಟಿ) ವರದಿಯನ್ನು ಕಾರ್ಯಸೂಚಿಯಲ್ಲಿ ತಿಳಿಸಲಾಗಿಲ್ಲ. ಐಟಿ ಪಾರ್ಕ್ ಮಾಡಬೇಕಾದರೆ ಸರಕಾರ ಭೂಮಿಯನ್ನು ನೋಟಿಫೈ ಮಾಡಿಕೊಂಡು ವಶಪಡಿಸಿಕೊಳ್ಳಬೇಕು. ಮನಪಾದಿಂದ ಅದು ಆಗುವುದಿಲ್ಲ. ಶಾಸಕರು ಸರಕಾರಕ್ಕೆ ಸಲ್ಲಿಸಬೇಕಾದ ಪತ್ರವನ್ನು ಮನಪಾಕ್ಕೆ ನೀಡುವ ಮೂಲಕ ವಾಮ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ವಿಪಕ್ಷ ನಾಯಕ ವಿನಯ ರಾಜ್ ಆರೋಪಿಸಿದರು.

ಹೊಸತಾಗಿಯೇ ಕಡತ ರಚನೆಯಾಗಿ ಬರಬೇಕಾಗಿತ್ತು ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ, ಸರಕಾರದ ಅನುಮತಿಗಾಗಿ ಶಾಸಕರು ಪತ್ರದ ಮೂಲಕ ಆಯುಕ್ತರಿಗೆ ಕೋರಿಕೆ ಸಲ್ಲಿಸಿದ್ದು, ಅದನ್ನು ಅಜೆಂಡಾದಲ್ಲಿ ತಿಳಿಸಲಾಗಿದೆ. ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿ, ಪ್ರಸಕ್ತ ತಿಳಿಸಿರುವ ಜಾಗದಲ್ಲಿಯೇ ಐಟಿ ಪಾರ್ಕ್ ನಿರ್ಮಾಣಕ್ಕಾಗಿ ನಿರ್ಣಯ ಮಾಡಲಾಗುತ್ತಿಲ್ಲ. ಜಾಗ ಕೊಡಲು ಮುಂದಾಗುವವರಿಗೆ ಟಿಡಿಆರ್ ಮೂಲಕ ಭೂಮಿ ಪಡೆಯಲು ಅನುಮತಿಗಾಗಿ ಸರಕಾರಕ್ಕೆ ಪ್ರಸ್ತಾವನೆಯನ್ನು ಮಾತ್ರವೇ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಉಪ ಮೇಯರ್ ಸುಂಗಳ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಸಂದೀಪ್, ಶೋಭಾ ರಾಜೇಶ್, ಲೀಲಾವತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News