ಮನಪಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದ ತ್ಯಾಜ್ಯ ಸಮಸ್ಯೆ; ಶೇ. 68ರಷ್ಟು ತ್ಯಾಜ್ಯ ವಿಂಗಡಣೆ: ಮೇಯರ್

Update: 2021-07-30 10:03 GMT

ಮಂಗಳೂರು, ಜು.29: ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಪಾಲಿಕೆ ವ್ಯಾಪ್ತಿಯಲ್ಲಿ ಸಮಸ್ಯೆ ಮುಂದುವರಿದಿರುವಂತೆಯೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಇಂದು ಸದಸ್ಯರ ನಡುವೆ ವ್ಯಾಪಕ ಚರ್ಚೆ ಹಾಗೂ ವಾಗ್ವಾದಕ್ಕೆ ಕಾರಣವಾಯಿತು.

ಸಭೆಯ ಆರಂಭದಲ್ಲಿಯೇ ಮೇಯರ್ ಪ್ರೇಮಾನಂದ ಶೆಟ್ಟಿಯವರು ಮಾತನಾಡುತ್ತಾ, ಕಸ ವಿಲೇಗೆ ಸಂಬಂಧಿಸಿ ಮನೆಗಳಿಂದ ಮೂಲದಿಂದಲೇ ತ್ಯಾಜ್ಯ ವಿಂಗಡಣೆಯಲ್ಲಿ ಶೇ. 70ರಷ್ಟು ಯಶಸ್ಸು ಸಾಧಿಸಲಾಗಿದೆ. ಹಾಗಾಗಿ ಸ್ವಚ್ಛ ಮಂಗಳೂರು ತ್ಯಾಜ್ಯ ಸಂಸ್ಕರಣೆಯಲ್ಲಿ ಮಂಗಳೂರು ಪಾಲಿಕೆ ಮತ್ತೆ 1ನೇ ಸ್ಥಾನಕ್ಕೇರುವುದರಲ್ಲಿ ಸಂಶಯವಿಲ್ಲ ಎಂದರು.

ಬಳಿಕ ಪ್ರಶ್ನೋತ್ತರ ವೇಳೆಯಲ್ಲಿ ತ್ಯಾಜ್ಯ ಸಮಸ್ಯೆಯನ್ನು ಪ್ರಸ್ತಾಪಿಸಿದ ಮಾಜಿ ಮೇಯರ್ ಭಾಸ್ಕರ ಕೆ., 2018ರಲ್ಲಿ ನಗರಕ್ಕೆ ಸ್ವಚ್ಛತೆಯಲ್ಲಿ 1ನೆ ಸ್ಥಾನ ದೊರಕಿ ಪ್ರಶಸ್ತಿ ಲಭಿಸಿತ್ತು. ಆದರೆ ಒಣಕಸ ಹಾಗೂ ಹಸಿ ಕಸ ವಿಂಗಡಣೆಯ ಬಳಿಕ ತ್ಯಾಜ್ಯ ನಿರ್ವಹಣೆ ವಹಿಸಿರುವ ಆ್ಯಂಟನಿ ಸಂಸ್ಥೆಯಿಂದ ಸಮಸ್ಯೆಯಾಗುತ್ತಿದೆ. ಸಮರ್ಪಕವಾಗಿ ಕಸವನ್ನು ವಿಲೇ ಮಾಡಲಾಗುತ್ತಿಲ್ಲ ಎಂದು ದೂರಿದರು.

ಸದಸ್ಯ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, 2012-13ನೆ ಸಾಲಿನಲ್ಲಿದ್ದ ಮಂಗಳೂರು ಕಸದ ಸಮಸ್ಯೆ ಮತ್ತೆ 2022ರ ವೇಳೆಗೆ ಮರುಕಳಿಸುವಂತಾಗಿದೆ. ರಸ್ತೆ ಬದಿಗಳಲ್ಲಿ ಕಸ ರಾಶಿ ಹಾಕುವುದು ಕಂಡು ಬರುತ್ತಿದೆ. ಕಸ ವಿಂಗಡಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ ಒಣ ಕಸ ವಾರಕ್ಕೊಮ್ಮೆಯೂ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಆಡಳಿತ ಪಕ್ಷದ ಕೆಲ ಸದಸ್ಯರು ತಮ್ಮ ವಾರ್ಡ್‌ನಲ್ಲಿ ಕಸ ಸಮರ್ಪಕವಾಗಿ ವಿಲೇ ಆಗುತ್ತಿರುವುದಾಗಿ ಹೇಳಿದಾಗ, ನಿಮಗೆ ಪ್ರಭಾವ ಇರಬೇಕು. ನಮಗೆ ಅದು ಸಿಗುತ್ತಿಲ್ಲ ಎಂದು ವಿಪಕ್ಷ ಸದಸ್ಯರು ಆಕ್ಷೇಪಿಸಿದರು. ಈ ಬಗ್ಗೆ ಕೆಲ ಹೊತ್ತು ಸದಸ್ಯರ ನಡುವೆ ವಾಗ್ವಾದ ನಡೆಯಿತು.

2019ರ ಆಗಸ್ಟ್ 6ರಂದು ಸಂಭವಿಸಿದ ಪಚ್ಚನಾಡಿ ತ್ಯಾಜ್ಯದುರಂತಕ್ಕೆ ಸಂಬಂಧಿಸಿ ಮದ್ಯಂತ ಆದೇಶದಂತೆ 14.8 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ರಿಟ್ ಬಗ್ಗೆ ಹೈಕೋರ್ಟ್ ನಿರ್ದೇಶನದಂತೆ ಸಾಷ್ಟು ಕ್ರಮ ಕೈಗೊಳ್ಳಲಾಗಿದೆ. 7 ಮೀ. ಎತ್ತರದ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ತ್ಯಾಜ್ಯ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಮೂರು ತಿಂಗಳ ಹಿಂದೆ ಒಣ ಕಸ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ತತ್‌ಕ್ಷಣ ಅಧಿಕಾರಿಗಳು, ಸಿಬಂದಿ ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಘಟಕದ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವೈಜ್ಞಾನಿಕ ರೀತಿಯ ಕಸ ವಿಲೇವಾರಿಗೆ ಆದ್ಯತೆ ನೀಡಲಾಗಿದ್ದು, ಈಗಾಗಲೇ ಶೇ.65 ರಿಂದ 70ರಷ್ಟು ಕಸ ಮೂಲದಿಂದಲೇ ಬೇರ್ಪಟ್ಟು ಬರುತ್ತಿದೆ. ಆ್ಯಂಟನಿ ಸಂಸ್ಥೆಯ ಗುತ್ತಿಗೆ ಅವಧಿ ಆರು ತಿಂಗಳಲ್ಲಿ ಮುಗಿಯಲ್ಲಿದ್ದು, ಮುಂದೆ ಪಾರಂಪರಿಕ ತ್ಯಾಜ್ಯ ಸಂಸ್ಕರಣೆಗೆ ಟೆಂಡರ್ ಆಗಿದ್ದು, ಸರಕಾರ ಅನುಮೋದನೆ ನೀಡುವ ಭರವಸೆ ಇದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಪೂರೈಕೆ ಬೇಡಿಕೆ ಮಟ್ಟದಲ್ಲಿ ಇಲ್ಲದ ಕಾರಣ ಜನರು ಹತಾಶರಾಗಿದ್ದಾರೆ ಎಂಬ ವಿಪಕ್ಷ ಸದಸ್ಯರ ಅಬ್ದುಲ್ ರವೂಫ್ ವಿಷಯ ಪ್ರಸ್ತಾಪಿಸಿದರು. ಬೇಡಿಕೆಗೆ ತಕ್ಕಷ್ಟು ಕಳೆದೊಂದು ವಾರದಿಂದ ಲಸಿಕೆ ಪೂರೈಕೆಯಾಗುತ್ತಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ, ಲಸಿಕೆ ಹೆಚ್ಚಿನ ಪೂರೈಕೆ ಕುರಿತಂತೆ ಸಂಬಂಧಪಟ್ಟವರ ಗಮನ ಸೆಳೆಯುವುದಾಗಿ ಹೇಳಿದರು.

ಎಡಿಬಿ 2ನೆ ಯೋಜನೆಯಡಿ ನೆಹರೂ ಮೈದಾನದ ಫುಟ್ಬಾಲ್ ಕ್ರೀಡಾಂಗಣದ ಬಳಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಟೆಂಡರ್ ಆಗಿದೆ. 6 ಕೋಟಿ ರೂ. ಖರ್ಚು ಮಾಡಿ ಕೊನೆಗೆ ಅದಕ್ಕೆ ತಡೆಯಾದಲ್ಲಿ ಈಗಾಗಲೇ ನೀರಿಗಾಗಿ ಸಂಕಷ್ಟ ಪಡುತ್ತಿರುವ ವಾರ್ಡ್‌ನ ಜನರು ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ ಎಂದು ಸದಸ್ಯ ಅಬ್ದುಲ್ ಲತೀಫ್ ಸಭೆಯ ಗಮನ ಸೆಳೆದರು.

ಫುಟ್ಬಾಲ್ ಮೈದಾನದ ಸ್ಥಳದ ಹೊರಭಾಗದ ಜಾಗದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.

ಕೃಷ್ಣಾಪುರದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕೆಂದು ಸದಸ್ಯೆ ಸಂಶಾದ್ ಅಬೂಬಕರ್ ಸಭೆಯಲ್ಲಿ ಆಗ್ರಹಿಸಿದರೆ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ಕಾರ್ಯವನ್ನು ಯಾವುದೇ ಹಬ್ಬದ ಒಂದೆರಡು ದಿನಗಳ ಮುಂಚಿತವಾಗಿ ಮಾಡುವುದನ್ನು ನಿಲ್ಲಿಸಬೇಕೆಂದು ಸದಸ್ಯ ಸಂಶುದ್ದೀನ್ ಆಗ್ರಹಿಸಿದರು.

ತುಳು ಭಾಷೆಗೆ ಅಧಿಕೃತ ಸ್ಥಾನಮಾನ; ಸರಕಾರಕ್ಕೆ ಪ್ರಸ್ತಾವನೆ

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು 8ನೇ ಪರಿಚ್ಛೇಕ್ಕೆ ಸೇರ್ಪಡೆಗೊಳಿಸಬೇಕೆಂಬುವುದು ದಶಕದ ಆಗ್ರಹ. ಆದರೆ ಈ ಹೋರಾಟಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಈಗಾಗಲೇ ಟ್ವಿಟ್ಟರ್ ಅಭಿಯಾನ ನಡೆದಿದೆ. ವಿಧಾನಸೌಧದಲ್ಲಿ ಕೂ ಜನಪ್ರತಿನಿಧಿಗಳು ಧ್ವನಿ ಎತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಈ ನಿಟ್ಟಿನಲ್ಲಿ ಪಾಲಿಕೆಯಿಂದ ಒತ್ತಾಯ ಮಾಡಬೇಕೆಂದು ಮನಪಾ ಸದಸ್ಯ ವರುಣ್ ಚೌಟ ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್, ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕೊರೋನ 2ನೆ ಅಲೆ ಎದುರಿಸುವಲ್ಲಿ ಯಶಸ್ವಿ

ಕೊರೋನ ಎರಡನೇ ಅಲೆ ಎದುರಿಸಲು ಕೋವಿಡ್ ವಾರಿಯರ್ಸ್‌, ಅಧಿಕಾರಿಗಳು, ಜನಪ್ರತಿನಿಧಿಗಳು ಉತ್ತಮ ಕೆಲಸ ನಿರ್ವಹಿಸಿದ್ದಾರೆ. ವರ್ಚುವಲ್ ಸಭೆ ನಡೆಸಿ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಾರ್ಡ್‌ಗೆ ಕೋವಿಡ್ ನೋಡಲ್ ಅಧಿಕಾರಿ ನೇಮಿಸಿದ್ದೇವೆ. ಟಾಸ್ಕ್‌ಪೋರ್ಸ್ ರಚನೆ ಮಾಡಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಕೊರೊನಾ ಜಾಗೃತಿ ಮೂಡಿಸಲಾಗಿದ್ದು, ಮೆಡಿಸಿನ್ ಕಿಟ್ ವಿತರಿಸಲಾಗಿದೆ. ಇದರ ಜೊತೆ ನಗರದ ಅಭಿವೃದ್ಧಿಯ ಕಡೆಗೂ ಗಮನಹರಿಸಿದ್ದು, ಮಳೆಗಾಲಕ್ಕೂ ಮುನ್ನ ಚರಂಡಿ ಹೂಳೆತ್ತುವಿಕೆ, ಚರಂಡಿ ಕಾಮಗಾರಿ ನಡೆಸಲಾಗಿದೆ.

- ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು ಮಹಾನಗರ ಪಾಲಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News