ಉಡುಪಿ : 174 ಮಂದಿಗೆ ಕೋವಿಡ್ ಪಾಸಿಟಿವ್ ; ಓರ್ವ ಬಲಿ

Update: 2021-07-29 14:13 GMT

ಉಡುಪಿ, ಜು.29: ಜಿಲ್ಲೆಯಲ್ಲಿ ಗುರುವಾರ ಒಟ್ಟು 174 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ದಿನದಲ್ಲಿ ಒಬ್ಬರು ಸೋಂಕಿಗೆ ಬಲಿಯಾದರೆ, 66 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲೀಗ 1000 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಗುರುವಾರ ಉಡುಪಿಯ 48ರ ಹರೆಯದ ಪುರುಷರೊಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಬೇರೆ ಕಾಯಿಲೆಯಿಂದ ಬಳಲುತಿದ್ದ ಇವರು ಕೋವಿಡ್ ಗುಣಲಕ್ಷಣದೊಂದಿಗೆ ತೀವ್ರ ಉಸಿರಾಟದ ತೊಂದರೆಗಾಗಿ ಜು.22ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 413ಕ್ಕೇರಿದೆ.

ಇಂದು ಕೊರೋನ ಪಾಸಿಟಿವ್ ದೃಢಪಟ್ಟ 174 ಮಂದಿಯಲ್ಲಿ 88 ಮಂದಿ ಪುರುಷರಾಗಿದ್ದರೆ, ಉಳಿದ 86 ಮಂದಿ ಮಹಿಳೆಯರು. ಇವರಲ್ಲಿ 93 ಮಂದಿ ಉಡುಪಿ ತಾಲೂಕು, 42 ಮಂದಿ ಕುಂದಾಪುರ ಹಾಗೂ 39 ಮಂದಿ ಕಾರ್ಕಳ ತಾಲೂಕಿನವರು. 174 ಮಂದಿಯಲ್ಲಿ 10 ಮಂದಿಗೆ ಕೋವಿಡ್ ಆಸ್ಪತ್ರೆ ಹಾಗೂ 164 ಮಂದಿಗೆ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ 66 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 68,058ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3601 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 69,472ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,75,608 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಮೂವರು ಬಿಡುಗಡೆ: ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದ ಒಂಭತ್ತು ಮಂದಿಯಲ್ಲಿ ಮೂವರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದ ಆರು ಮಂದಿ ಮಣಿಪಾಲ ಕೆಎಂಸಿ ಹಾಗೂ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

2,225 ಮಂದಿಗೆ ಕೋವಿಡ್ ಲಸಿಕೆ

ಉಡುಪಿ ಜಿಲ್ಲೆಯಲ್ಲಿ ಗುರುವಾರ 2,225 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ 1,573 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿ ಸಿದರೆ, 652 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು 18ರಿಂದ 44 ವರ್ಷದೊಳಗಿನ 1,008 ಮಂದಿ ಮೊದಲ ಡೋಸ್ ಹಾಗೂ 144 ಮಂದಿ ಎರಡನೇ ಡೋಸನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 563 ಮಂದಿ ಮೊದಲ ಡೋಸ್ ಹಾಗೂ 505 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. ಮೂವರು ಆರೋಗ್ಯ ಕಾರ್ಯಕರ್ತರು ಹಾಗೂ ಇಬ್ಬರು ಮುಂಚೂಣಿ ಕಾರ್ಯಕರ್ತರಿಗೂ ಇಂದು ಲಸಿಕೆ ನೀಡಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 5,05,748 ಮಂದಿ ಲಸಿಕೆಯ ಮೊದಲ ಡೋಸ್ ಪಡೆದರೆ, 1,79,948 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News